ನವದೆಹಲಿ: ಕೊರೊನಾ ಸಾಂಕ್ರಾಮಿಕ ಏರಿಕೆಯ ಹೊರತಾಗಿಯೂ ಕೆಲವು ವಲಯಗಳ ನಿರಂತರ ಸೇವೆಯನ್ನು ಒದಗಿಸುತ್ತಿವೆ. ಅವುಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರವೂ ಒಂದು. ಕೋವಿಡ್ ಸೋಂಕು ಬ್ಯಾಂಕ್ ನೌಕರರ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಒಕ್ಕೂಟದ ಮೂಲಗಳು ತಿಳಿಸಿವೆ.
ಕೊರೊನಾದಿಂದಾಗಿ ಇದುವರೆಗೆ ಒಂದು ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಖಿಲ ಭಾರತ ಫೆಡರೇಷನ್ ಆಫ್ ಬ್ಯಾಂಕ್ ಅಧಿಕಾರಿಗಳ ಪ್ರಧಾನ ಕಾರ್ಯದರ್ಶಿ ಎಸ್. ನಾಗರಾಜನ್ ತಿಳಿಸಿದ್ದಾರೆ.
ಬ್ಯಾಂಕ್ ನೌಕರರು ಮುಂಚೂಣಿ ಕೆಲಸಗಾರರಾಗಿದ್ದು, ಅವರೆಲ್ಲಾ ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದಾರೆ. ಕೋವಿಡ್ ದೇಶದಲ್ಲಿ ವ್ಯಾಪಕವಾಗಿ ಹಬ್ಬುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇದರ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ರಾಜ್ಯಗಳು ಪೂರ್ಣ ಅಥವಾ ಭಾಗಶಃ ಲಾಕ್‌ಡೌನ್‌ಗಳನ್ನು ವಿಧಿಸಿವೆ. ಆದರೆ, ತುರ್ತು ವಲಯದ ಬ್ಯಾಂಕುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.
ಕೆಲಸದ ಸಮಯದಲ್ಲಿ ಸ್ವಲ್ಪ ವಿಶ್ರಾಂತಿ ಇದ್ದರೂ ಶೇ 50ರಷ್ಟು ಸಿಬ್ಬಂದಿಯೊಂದಿಗೆ ಕೆಲಸ ಮುಂದುವರಿದಿದೆ. ಹೀಗಾಗಿ, ಅನೇಕ ಉದ್ಯೋಗಿಗಳು ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದಾರೆ. ಇದುವರೆಗೆ 1,200 ನೌಕರರು ಸಾವನ್ನಪ್ಪಿದ್ದಾರೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ಹೇಳಿದ್ದಾರೆ.
ಅನೇಕರು ಕೋವಿಡ್‌ನಿಂದ ಬಳಲುತ್ತಿದ್ದಾರೆ ಎಂಬುದು ತಿಳಿದುಬಂದಿದೆ. ಅನೇಕ ಬ್ಯಾಂಕ್ಗಳು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ವಿವರಗಳನ್ನು ಹಂಚಿಕೊಳ್ಳಲು ಮುಂದೆ ಬರುತ್ತಿಲ್ಲ. ಮೃತರ ಕುಟುಂಬಸ್ಥರಿಗೆ ಪಾವತಿಸಬೇಕಾದ ಪರಿಹಾರದ ಬಗ್ಗೆ ಸರಿಯಾದ ಕಾರ್ಯವಿಧಾನಗಳನ್ನು ಘೋಷಿಸುವಲ್ಲಿ ವಿಫಲವಾಗಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯಾಗಿದ್ದ ದೇಬಾಶಿಶ್ ಪಾಂಡೆ ಅವರು ಇತ್ತೀಚೆಗೆ ರಾಜ್ಯ ಸರ್ಕಾರಗಳಿಗೆ ಪತ್ರವೊಂದನ್ನು ಬರೆದಿದ್ದು, ಬ್ಯಾಂಕ್ಗಳು ಮತ್ತು ವಿಮಾ ಕಂಪನಿಗಳ ಎಲ್ಲ ಉದ್ಯೋಗಿಗಳಿಗೆ ಲಸಿಕೆ ಹಾಕುವಲ್ಲಿ ಆದ್ಯತೆ ನೀಡುವಂತೆ ಕೋರಿದ್ದಾರೆ.