ಮುಂಬೈ : ಪೂರ್ವ ಯುರೋಪ್ನಲ್ಲಿ ಯುದ್ಧದ ಭೀತಿ ಇರುವ ಹಿನ್ನೆಲೆ ಷೇರುಪೇಟೆಯಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೋಮವಾರ ಇಳಿಕೆಯೊಂದಿಗೆ ದಿನದ ವಹಿವಾಟನ್ನು ಅಂತ್ಯಗೊಳಿಸಿವೆ.
ಏಷ್ಯನ್ ಷೇರುಗಳಲ್ಲಿ ನಷ್ಟ ಉಂಟಾಗುತ್ತಿದ್ದಂತೆ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ ಸುಮಾರು 700 ಅಂಕಗಳಷ್ಟು ಕುಸಿತ ಕಂಡಿತು. ಆದರೆ, ಉಕ್ರೇನ್ ಬಿಕ್ಕಟ್ಟಿನ ಕುರಿತು ಯುಎಸ್ ಮತ್ತು ರಷ್ಯಾ ನಡುವಿನ ಮಾತುಕತೆ ನಡೆಯಲಿದೆ ಎಂಬ ಭರವಸೆ ಹಿನ್ನೆಲೆ ವಹಿವಾಟಿನಲ್ಲಿ ಹೂಡಿಕೆದಾರರು ಹೆಚ್ಚಿನ ಆಸಕ್ತಿ ತೋರಿಸಿದ್ದರು.
ಸೆನ್ಸೆಕ್ಸ್ ಅಂತಿಮವಾಗಿ 149.38 ಪಾಯಿಂಟ್ ಅಥವಾ 0.26ರಷ್ಟು ಇಳಿಕೆಯಾಗಿದೆ. 57,683.59 ಅಂಕಗಳಲ್ಲಿ ದಿನದ ವಹಿವಾಟು ಕೊನೆಗೊಂಡಿದೆ. ಇನ್ನೂ ಎನ್‌ಎಸ್‌ಇ ನಿಫ್ಟಿ ಸಹ 69.65 ಪಾಯಿಂಟ್ ಕುಸಿದಿದ್ದು, 17,206.65ಕ್ಕೆ ದಿನದ ವಹಿವಾಟು ಕೊನೆಗೊಳಿಸಿದೆ.
ಇದನ್ನೂ ಓದಿ: ಒಂದೇ ಪ್ಲಾನ್ಗೆ ಅಂಟಿಕೊಂಡು ಕೂಡಬೇಡಿ.. ಬೇರೆ ಬೇರೆ ಯೋಜನೆಗಳಲ್ಲಿ ಹಣ ತೊಡಗಿಸಿ: ಇಲ್ಲಿವೆ ಕೆಲ ಟಿಪ್ಸ್!
ಸೆನ್ಸೆಕ್ಸ್ ಘಟಕಗಳಲ್ಲಿ 21 ಷೇರುಗಳು ಕೆಂಪು ಬಣ್ಣದಲ್ಲಿ ಕೊನೆಗೊಂಡವು. ಸನ್ ಫಾರ್ಮಾ, ಟಿಸಿಎಸ್ ಮತ್ತು ಐಟಿಸಿ ಷೇರುಗಳು ನಷ್ಟವನ್ನು ಅನುಭವಿಸಿದವು. ಇದಕ್ಕೆ ವ್ಯತಿರಿಕ್ತವಾಗಿ, ಐಟಿ ಮೇಜರ್‌ಗಳಾದ ವಿಪ್ರೋ ಮತ್ತು ಇನ್ಫೋಸಿಸ್ ಪ್ರಮುಖ ಲಾಭ ಗಳಿಸಿದವು.
ಏಷ್ಯಾದ ಇತರೆಡೆಗಳಲ್ಲಿ, ಷೇರುಗಳು ಕಡಿಮೆ ಮಟ್ಟದಲ್ಲಿ ಕೊನೆಗೊಂಡವು. ಆದರೆ, ಯುಎಸ್ ಅಧ್ಯಕ್ಷ ಜೋ ಬೈಡನ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಸಂಭವನೀಯ ಸಭೆಯ ವರದಿಗಳ ಮೇಲೆ ತಮ್ಮ ಆರಂಭಿಕ ಅಧಿವೇಶನದಲ್ಲಿ ಆಳವಾದ ನಷ್ಟವನ್ನು ಅನುಭವಿಸಿದವು.