ನವದೆಹಲಿ: ಪಂಜಾಬ್ ಮತ್ತು ಹರಿಯಾಣದ ಹಲವು ಭಾಗಗಳ 32 ಸ್ಥಳಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯಿಂದಾಗಿ ರೈಲ್ವೆಗೆ, ತನ್ನ ಸರಕು ಸಾಗಣೆ ಆದಾಯದಿಂದ 1,200 ಕೋಟಿ ರೂ. ಕಳೆದುಕೊಂಡಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ಪಂಜಾಬ್‌ನಲ್ಲಿನ ಹಳ್ಳಿಗಳ ಮೇಲೆ ರೈತರ ಪ್ರತಿಭಟನೆಯಿಂದಾಗಿ ಸರಕು ಸಾಗಣೆಯು ಬಲವಂತವಾಗಿ ಸ್ಥಗಿತಗೊಂಡಿದೆ. ಇದರಿಂದ ರೈಲ್ವೆಗೆ ಸಾವಿರಾರು ಕೋಟಿ ರೂಪಾಯಿ ಆದಾಯವನ್ನು ಕಳೆದುಕೊಳ್ಳುತ್ತಲೇ ಹೋಗುತ್ತಿದೆ ಎಂದು ರೈಲ್ವೆ ವಕ್ತಾರರು ತಿಳಿಸಿದ್ದಾರೆ.
ಇಲ್ಲಿಯವರೆಗೆ 2,225ಕ್ಕೂ ಹೆಚ್ಚು ಸರಕು ಸಾಗಣೆ ರೈಲುಗಳು ಸ್ಥಗಿತವಾಗಿವೆ. ಈಗಾಗಲೇ 1,200 ಕೋಟಿ ರೂ.ಯಷ್ಟು ನಷ್ಟ ದಾಟಬಹುದೆಂದು ನಿರೀಕ್ಷಿಸಲಾಗಿದೆ ಎಂದರು.
ಪ್ಲಾಟ್‌ಫಾರ್ಮ್ ಮತ್ತು ರೈಲ್ವೆ ಹಳಿಗಳ ಬಳಿ ರೈತರು ಧರಣಿ ನಡೆಸುತ್ತಿದ್ದಾರೆ. ಕಾರ್ಯಾಚರಣೆ ಮತ್ತು ಸುರಕ್ಷತೆಯ ಪರಿಗಣನೆಯಿಂದಾಗಿ ರೈಲು ಸಂಚಾರವನ್ನು ಮತ್ತೆ ಸ್ಥಗಿತಗೊಳಿಸಲಾಗಿದೆ. ಪ್ರತಿಭಟನೆ ನಿರತರು ಇದ್ದಕ್ಕಿದ್ದಂತೆ ಕೆಲವು ರೈಲು ಸಂಚಾರಗಳಿಗೆ ತಡೆಯೊಡ್ಡಿದ್ದಾರೆ. ವಿವಿಧ ಸ್ಥಳಗಳಲ್ಲಿ ಅದರಲ್ಲೂ ವಿಶೇಷವಾಗಿ ಜಂಡಿಯಾಲಾ, ನಭಾ, ತಲ್ವಾಂಡಿ ಸಾಬೊ ಮತ್ತು ಬಟಿಂಡಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಿಗ್ಬಂಧನ ಮುಂದುವರೆದಿದೆ ಎಂದು ಹೇಳಿದರು.
ಬುಧವಾರ ಬೆಳಗ್ಗೆ 6 ಗಂಟೆಗೆ ವರದಿಯ ಪ್ರಕಾರ, 32 ಸ್ಥಳಗಳಲ್ಲಿ ರೈತರ ಆಂದೋಲನ ಮುಂದುವರೆದಿದೆ. ಉತ್ತರ ರೈಲ್ವೆಯಲ್ಲಿ 31 ಮತ್ತು ವಾಯುವ್ಯ ರೈಲ್ವೆ ವಿಭಾಗದಲ್ಲಿ ಒಂದು ಇದರಲ್ಲಿ ಸೇರಿವೆ. ಸೆಪ್ಟೆಂಬರ್‌ನಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಿದ ಮೂರು ವಿವಾದಾತ್ಮಕ ಕೃಷಿ ಮಸೂದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ರೈಲ್ವೆ ಸಚಿವ ಪಿಯೂಷ್ ಗೋಯಲ್ ಅಕ್ಟೋಬರ್ 26ರಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರಿಗೆ ಪತ್ರ ಬರೆದು, ಸುರಕ್ಷತೆ ಮತ್ತು ಕಾರ್ಯಾಚರಣೆಯನ್ನು ಪುನರಾರಂಭಿಸಲು ಕರ್ತವ್ಯದಲ್ಲಿ ಇರುವ ಚಾಲನಾ ಸಿಬ್ಬಂದಿ ಭದ್ರತೆಯ ಬಗ್ಗೆ ಭರವಸೆ ನೀಡುವಂತೆ ಕೋರಿ ಪತ್ರ ಬರೆದಿದ್ದರು.