ನವದೆಹಲಿ: ಅಕ್ಟೋಬರ್ ತಿಂಗಳ ಚಿಲ್ಲರೆ ಬೆಲೆ ಆಧರಿಸಿದ ಹಣದುಬ್ಬರವು 16 ತಿಂಗಳ ಗರಿಷ್ಠ ಮಟ್ಟಕ್ಕೆ ಅಂದರೆ ಶೇ 4.62ರಷ್ಟು ಏರಿಕೆಯಾಗಿದೆ.
ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಹಣದುಬ್ಬರವು ಏರಿಕೆ ಕಂಡಿದ್ದು, ಆಹಾರ ಪದಾರ್ಥಗಳ ಬೆಲೆ ಏರಿಕೆಯು ಸೆಪ್ಟೆಂಬರ್ ತಿಂಗಳಲ್ಲಿ ಶೇ 5.11ರಿಂದ ಅಕ್ಟೋಬರ್ನಲ್ಲಿ ಶೇ 7.89ಕ್ಕೆ ತಲುಪಿದೆ. ಇದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸುರಕ್ಷಿತ ಮಟ್ಟವಾದ ಶೇ 4ಕ್ಕಿಂತ ಅಧಿಕವಾಗಿದೆ.
ಚಿಲ್ಲರೆ ಹಣದುಬ್ಬರ ಏರಿಕೆಯು ಕೇಂದ್ರೀಯ ಬ್ಯಾಂಕ್ನ ಹಣಕಾಸು ನೀತಿ ಸಮಿತಿಯು ರೆಪೊ ದರಗಳನ್ನು ತಗ್ಗಿಸುವ ನಿರ್ಧಾರಕ್ಕೆ ಬೆಂಬಲವಾಗಿ ನಿಲ್ಲಲಿದೆ. ಇದರಿಂದ ಬಡ್ಡಿ ದರ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ.
ಮುಂಗಾರು ಮಳೆಯ ಅತಿವೃಷ್ಟಿ ಹಾಗೂ ಅನಾವೃಷ್ಟಿಯ ಕಾರಣಕ್ಕೆ ಆಹಾರ ಪದಾರ್ಥಗಳ ಬೆಲೆಗಳಲ್ಲಿ ಏರಿಕೆ ಕಂಡುಬಂದಿದೆ. ಹೀಗಾಗಿ ಹಣದುಬ್ಬರ ತೀವ್ರವಾಗಿ ಹೆಚ್ಚಳವಾಗಿದೆ. ಚಿಲ್ಲರೆ ಹಣದುಬ್ಬರ ಗರಿಷ್ಠ ಮಟ್ಟದಲ್ಲಿ ಮುಂದುವರಿಯಲಿದ್ದು, ಮಂದಗತಿಯ ಆರ್ಥಿಕತೆ ಚೇತರಿಕೆಗೆ ಹಿನ್ನಡೆ ಆಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.