ಮುಂಬೈ: ರೆಪೋ ದರ ಹಾಗೂ ರಿವರ್ಸ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಯಥಾಸ್ಥಿತಿ ಕಾಯ್ದುಕೊಂಡಿದೆ.
ಇಂದು ಸುದ್ದಿಗೋಷ್ಠಿ ನಡೆಸಿ ಹಣಕಾಸು ನೀತಿ ಬಗ್ಗೆ ಮಾಹಿತಿ ನೀಡಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ಸದ್ಯ ರೆಪೋ ದರ ಶೇ.4ರಷ್ಟು ಹಾಗೂ ರಿವರ್ಸ್ ರೆಪೋ ದರ ಶೇ. 3.35 ರಷ್ಟಿದ್ದು, ಇದೇ ಮುಂದುವರೆಯಲಿದೆ. ಹಣಕಾಸು ನೀತಿ ಸಮಿತಿ (ಎಂಪಿಸಿ) ಜೊತೆ ನಡೆಸಿದ ಸಭೆಯಲ್ಲಿ ಈ ಕುರಿತಾಗಿ ಸರ್ವಾನುಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಯಥಾಸ್ಥಿತಿ ಕಾಯ್ದುಕೊಳ್ಳುವ ಕುರಿತು ಎಂಪಿಸಿ ಜೊತೆ ಕಳೆದ ಮೂರು ದಿನಗಳ ಕಾಲ ಸಭೆ ನಡೆಸಿ ಚರ್ಚಿಸಲಾಗಿದೆ. ಆರ್ಥಿಕ ವ್ಯವಸ್ಥೆ ಪುನಶ್ಚೇತನಗೊಳಿಸುವ ಹಾಗೂ ದೇಶದ ಆರ್ಥಿಕತೆ ಮೇಲೆ ಕೋವಿಡ್ ಬಿಕ್ಕಟ್ಟು ಬೀರಿರುವ ವ್ಯತಿರಿಕ್ತ ಪರಿಣಾಮವನ್ನು ತಗ್ಗಿಸಲು ನಿಟ್ಟಿನಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಮತ್ತು ಅಗತ್ಯವಿದ್ದರೆ ಮುಂದಿನ ಹಣಕಾಸು ವರ್ಷದಲ್ಲಿಯೂ ಕೂಡ ಆರ್‌ಬಿಐ ತನ್ನ ನಿಲುವನ್ನು ಮುಂದುವರಿಸಲಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಇದನ್ನೂ ಓದಿ: ಒಂದು ಮಿಲಿಯನ್ ಫಾಲೋವರ್ಸ್ ಹೊಂದಿದ ಜಗತ್ತಿನ ಮೊದಲ ಕೇಂದ್ರೀಯ ಬ್ಯಾಂಕ್ ಆರ್‌ಬಿಐ
ಜಿಡಿಪಿಯಲ್ಲಿ ಸ್ವಲ್ಪ ಸುಧಾರಣೆ
ಹಣಕಾಸು ವರ್ಷ 2020-21ರ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) ಜಿಡಿಪಿ ದರ (ಆರ್ಥಿಕ ವೃದ್ಧಿ ದರ)ವು 23.9ರಷ್ಟು ಕುಸಿತ ಕಂಡಿತ್ತು. ಆದರೆ ಎರಡನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ಸ್ವಲ್ಪ ಸುಧಾರಣೆ ಕಂಡಿದ್ದು, -7.5ರಷ್ಟು ಇಳಿಕೆ ಕಂಡಿದೆ. ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (ಎಂಎಸ್ಎಫ್) ದರ ಮತ್ತು ಬ್ಯಾಂಕ್ ಬಡ್ಡಿ ದರ ಕೂಡ ಶೇ.4.25 ರಂತೆ ಬದಲಾಗದೆ ಉಳಿದಿದೆ ಎಂದು ದಾಸ್ ಮಾಹಿತಿ ನೀಡಿದ್ದಾರೆ.
ರೆಪೋ - ರಿವರ್ಸ್ ರೆಪೋ ದರ ಎಂದರೇನು?
ವಾಣಿಜ್ಯ ಬ್ಯಾಂಕುಗಳಿಗೆ ಆರ್‌ಬಿಐ ನೀಡುವ ಸಾಲದ ಮೇಲಿನ ಬಡ್ಡಿ ದರವನ್ನು 'ರೆಪೋ ದರ' ಎನ್ನುತ್ತಾರೆ. ಹಣದುಬ್ಬರವನ್ನು ನಿಯಂತ್ರಿಸಲು ಆರ್‌ಬಿಐ ಬಳಸುವ ಮಾರ್ಗ ಇದಾಗಿದೆ. ರೆಪೋ ದರ ಕಡಿಮೆ ಇದ್ದರೆ, ಅಂದರೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿದರೆ ಬ್ಯಾಂಕ್ಗಳು ಹೆಚ್ಚಿನ ಪ್ರಮಾಣದಲ್ಲಿ ಸಾಲ ಪಡೆಯುತ್ತದೆ.
ರಿವರ್ಸ್ ರೆಪೊ ದರ ಎಂದರೆ ಆರ್‌ಬಿಐನಲ್ಲಿ ಬ್ಯಾಂಕುಗಳಿಡುವ ಹಣಕ್ಕೆ ನೀಡುವ ಬಡ್ಡಿ ದರವಾಗಿದೆ.
ಸೆನ್ಸೆಕ್ಸ್ ಜಿಗಿತ
ರೆಪೋ ದರದಲ್ಲಿ ದೇಶದ ಕೇಂದ್ರ ಬ್ಯಾಂಕ್ ನಿರ್ಧಾರ ಪ್ರಕಟಿಸುತ್ತಿದ್ದಂತೆ ಮುಂಬೈ ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟ ಮುಂದುವರೆದಿದೆ. 301 ಅಂಕಗಳ ಏರಿಕೆಯೊಂದಿಗೆ 44,934ರಲ್ಲಿ ಸೆನ್ಸೆಕ್ಸ್ ವಹಿವಾಟು ಮುಂದುವರೆಸಿದೆ. 89 ಅಂಕಗಳ ಜಿಗಿತದೊಂದಿಗೆ ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 13,223 ರಲ್ಲಿದೆ.