ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆಯಲ್ಲಿ ರೆಪೊ ದರವನ್ನು ಶೇ. 6.25ರಿಂದ ಶೇ. 6ಕ್ಕೆ ಇಳಿಸುವ ನಿರ್ಧಾರ ತೆಗೆದುಕೊಂಡಿದೆ.
ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ನಡೆದ 2019-20ರ ವಿತ್ತೀಯ ವರ್ಷದ ಮೊದಲ ಸಭೆಯಲ್ಲಿ ಹಣಕಾಸು ನೀತಿ ಸಮಿತಿಯ ಆರು ಜನ ಸದಸ್ಯರು ಭಾಗವಹಿಸಿದ್ದರು. ರೆಪೊ ದರವನ್ನು ಶೇ 25ರಷ್ಟು ಇಳಿಸುವ ತೀರ್ಮಾನ ಹೊರಡಿಸಿದ್ದಾರೆ. ಈ ಹಿಂದಿನ ರೆಪೊ ಶೇ 6.25 ಇದದ್ದು, ಈಗ ಶೇ 6ಕ್ಕೆ ತಲುಪಿದೆ.
ಹಣದುಬ್ಬರ ಇಳಿಕೆ, ಆರ್ಥಿಕ ಪ್ರಗತಿ ಚೇತರಿಕೆ, ನಿಧಾನಗತಿಯ ಜಾಗತಿಕ ಆರ್ಥಿಕ ಮತ್ತು ಖಾಸಗಿ ವಲಯದಲ್ಲಿನ ಹೂಡಿಕೆ ಹೆಚ್ಚಳವಾಗಿರುವ ಕಾರಣ ಮೂಲಾಂಶದಲ್ಲಿ ಶೇ 0.25ರಷ್ಟು ತಗ್ಗಿಸಿದೆ. ಗ್ರಾಹಕ ದರ ಸೂಚಿ (ಸಿಪಿಐ)ಯು ಕಳೆದ ಆರು ತಿಂಗಳಿಂದ ಶೇ. 4ರ ಒಳಗೆ ಇದ್ದು, ರೆಪೊ ದರವನ್ನು ತಗ್ಗಿಸಲಾಗಿದೆ.
ಆರ್ಬಿಐ 2018-19ರಲ್ಲಿ ಹಣದುಬ್ಬರ ಶೇ 4ರ ಕೆಳಗೆ ಇಳಿಸುವ ನಿರೀಕ್ಷೆ ಇರಿಸಿಕೊಂಡಿತ್ತು. ಆಹಾರ ಮತ್ತು ಇಂಧನದ ಹಣದುಬ್ಬರ ಶೇ 5.5ಕ್ಕೆ ತಲುಪಿತು. 2018-19ರ ಸಾಲಿನ ಜಿಡಿಪಿ ಬೆಳವಣಿಗೆಯನ್ನು ಶೇ 7.1ಕ್ಕೆ ಸೀಮಿತಗೊಳಿಸಿದ್ದು, 2019-20ರಲ್ಲಿ ಶೇ 7.2ಕ್ಕೆ ಏರಿಸಲಾಗಿದೆ. ಈ ಎಲ್ಲ ವಿದ್ಯಾಮಾನಗಳನ್ನು ಗಮನದಲ್ಲಿ ಇರಿಸಿಕೊಂಡು ಆರ್ಬಿಐ ರೆಪೊ ದರ ಇಳಿಸಿದೆ.