ನವದೆಹಲಿ : ವಿಶ್ವದಲ್ಲೇ ಮೊಬೈಲ್ ತಯಾರಿಕೆಯಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ಎಲೆಕ್ಟ್ರಾನಿಕ್ ಉತ್ಪಾದನಾ ವಲಯಕ್ಕೆ ಉತ್ತೇಜನ ನೀಡುವ ಸಲುವಾಗಿ 3 ಯೋಜನೆಗಳನ್ನು ಘೋಷಿಸಲಾಗಿದೆ ಎಂದು ಕೇಂದ್ರ ಕಾನೂನು, ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಸ್ಕೀಂ, ಕಾಂಪೊನೆಂಟ್ ಮ್ಯಾನುಫ್ಯಾಕ್ಟರಿಂಗ್ ಸ್ಕೀಂ ಮತ್ತು ಕ್ಲಸ್ಟರ್ ಸ್ಕೀಂ ಎಂದು ವಿಭಾಗಿಸಿದ್ದಾರೆ. ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಸ್ಕೀಂ ನಲ್ಲಿ ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕೆ ಅಥವಾ ಉತ್ಪಾದನೆಯನ್ನ ಪ್ರೋತ್ಸಾಹಿಸಲಾಗುತ್ತದೆ. ಉಳಿದೆರಡು ಯೋಜನೆಗಳು ಈ ವಲಯವನ್ನು ಅಭಿವೃದ್ಧಿಪಡಿಸುವುದಾಗಿದೆ.
2014ರಲ್ಲಿ ಭಾರತದಲ್ಲಿ ಎಲೆಕ್ಟ್ರಾನಿಕ್ ತಯಾರಿಕೆಯಲ್ಲಿ 1,90,366 ಕೋಟಿ ರೂಪಾಯಿಗಳ ಮೌಲ್ಯ ಹೊಂದಿತ್ತು. ಇದೀಗ ಆ ಪ್ರಮಾಣ 4,58,000 ಕೋಟಿ ರೂಪಾಯಿಗಳಷ್ಟಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಪಾಲು 2012ರಲ್ಲಿ 1.3 ರಷ್ಟಿತ್ತು. ಅದು 2018ರಲ್ಲಿ 3 ರಷ್ಟಿತ್ತು ಎಂದು ಸಚಿವ ರವಿಶಂಕರ್ ಪ್ರಸಾದ್ ವಿವರಿಸಿದ್ದಾರೆ.
ಭಾರತದಲ್ಲಿ 2 ಮೊಬೈಲ್ ತಯಾರಿಕಾ ಕಂಪನಿಗಳಿಂದ ಆರಂಭವಾಗಿ ಇದೀಗ 200 ತಯಾರಿಕಾ ಘಟಕಗಳನ್ನು ಹೊಂದಿದ್ದು, ವಿಶ್ವದಲ್ಲೇ 2ನೇ ಸ್ಥಾನದಲ್ಲಿದೆ ಎಂದಿದ್ದಾರೆ.