ನವದೆಹಲಿ: ಕೇಂದ್ರ ಸರ್ಕಾರವು ಪಡಿತರ ವಿತರಣೆಯಲ್ಲಿ ಪಾರದರ್ಶಕತೆ ತರಲು 'ಒನ್ ನೇಷನ್ ಒನ್ ರೇಷನ್ ಕಾರ್ಡ್' ಮುಖಾಂತರ ಬಡವರಿಗೆ ಸಬ್ಸಿಡಿಯುಕ್ತ ದರದಲ್ಲಿ ಆಹಾರ ಧಾನ್ಯ ವಿತರಿಸಲು ನಿರ್ಧರಿಸಿದೆ.
ಕೇಂದ್ರ ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯಗಳ ಆಹಾರ ಕಾರ್ಯದರ್ಶಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಉದ್ದೇಶಿತ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೆ ತರುವಂತೆ ಸೂಚಿಸಲಾಗಿದೆ. ಬಡವರು ಕೆಲಸ ಅರಸಿ ಇತರೆ ಯಾವುದೇ ಕಡೆಗೆ ವಲಸೆ ಹೋದಾಗ ನಿರಾತಂಕವಾಗಿ ಆಹಾರ ಧಾನ್ಯ ಪಡೆಯಲು ಈ ಕಾರ್ಡ್ ನೆರವಾಗಲಿದೆ. ಇಂತಹ ಮಹತ್ವದ ಉದ್ದೇಶಕ್ಕಾಗಿ 'ಒನ್ ನೇಷನ್, ಒನ್ ರೇಷನ್ ಕಾರ್ಡ್' ರೂಪಿಸಲಾಗುತ್ತಿದೆ ಎಂದು ಪಾಸ್ವಾನ್ ಸಭೆಯ ಬಳಿಕ ಹೇಳಿದರು.
ವಲಸಿಗ ಕಾರ್ಮಿಕರು ಯಾವುದೇ ನಿರ್ದಿಷ್ಟ ಪಡಿತರ ಅಂಗಡಿಯಿಂದ ಆಹಾರ ಧಾನ್ಯಗಳನ್ನು ಖರೀದಿಸಬೇಕಾಗಿಲ್ಲ. ಬದಲಾಗಿ ತಮಗೆ ಸಮೀಪದ ಯಾವುದೇ ಪಡಿತರ ಅಂಗಡಿಯಿಂದಲೂ ಖರೀದಿಸಬಹುದಾಗಿದೆ. ಜತೆಗೆ ಭ್ರಷ್ಟಾಚಾರಕ್ಕೂ ಕಡಿವಾಣ ಬೀಳಲಿದೆ ಎಂದು ತಿಳಿಸಿದರು.