ನವದೆಹಲಿ: ಮಾರಣಾಂತಿಕ ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ಮೂರು ವಾರಗಳ ಕಾಲ ದೇಶಾದ್ಯಂತ ಲಾಕ್ಡೌನ್ ವಿಧಿಸುವುದಾಗಿ ಘೋಷಿಸಿದ್ದಾರೆ.
ಆದರೆ, ಮುಖ್ಯ ವೇಳೆಯಲ್ಲಿ ಜನರ ಅಗತ್ಯ ವಸ್ತುಗಳಾದ ಆಹಾರ ಪದಾರ್ಥ, ಹಾಲು, ತರಕಾರಿ, ಹಣ್ಣು ಸೇರಿದಂತೆ ಇತರೆ ವಸ್ತುಗಳು ಹಾಗೂ ಬ್ಯಾಂಕ್ಗಳು, ವಿಮಾ ಕಂಪನಿಗಳು, ಎಟಿಎಂ ಕೇಂದ್ರಗಳು, ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳು ತೆರೆದಿರುತ್ತವೆ.
ಲಾಕ್ ಡೌನ್ ಸಮಯದಲ್ಲಿ ಸರ್ಕಾರದ ಕಚೇರಿಗಳು, ಅದರ ಸ್ವಾಯತ್ತ ಸಂಸ್ಥೆಗಳು ಸೇರಿದಂತೆ ಅಧೀನ ಮತ್ತು ಸಾರ್ವಜನಿಕ ವಲಯದ ಕಂಪನಿಗಳ ಕಚೇರಿಗಳು ಮುಚ್ಚಲ್ಪಡುತ್ತವೆ ಎಂದು ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.
ಇವುಗಳ ನಡುವೆ ಸೈನ್ಯದ ಸೇವೆಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ, ಖಜಾನೆ, ಪೆಟ್ರೋಲಿಯಂ, ಸಿಎನ್‌ಜಿ, ಪಿಎನ್‌ಜಿ, ಎಲ್‌ಪಿಜಿ ಸೇರಿದಂತೆ ಸಾರ್ವಜನಿಕ ಉಪಯುಕ್ತತೆಗಳಾದ ಇಂಧನ ಉತ್ಪಾದನೆ ಮತ್ತು ವಿತರಣಾ ಘಟಕಗಳು, ಅಂಚೆ ಕಚೇರಿ, ರಾಷ್ಟ್ರೀಯ ಮಾಹಿತಿ ಕೇಂದ್ರ, ವಿಪತ್ತು ಎಚ್ಚರಿಕೆ ಏಜೆನ್ಸಿಗಳು ಯಥಾವತ್ತಾಗಿ ತೆರೆದಿರುತ್ತವೆ ಎಂದು ತಿಳಿಸಿದೆ.
ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಸರ್ಕಾರಿ ಮತ್ತು ಸ್ವಾಯತ್ತ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಕಂಪನಿಗಳ ಕಚೇರಿಗಳು ಮುಚ್ಚಿರುತ್ತವೆ. ಆದರೆ ಪೊಲೀಸ್, ಗೃಹರಕ್ಷಕ ದಳ, ನಾಗರಿಕ ಭದ್ರತೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ವಿಪತ್ತು ನಿರ್ವಹಣೆ ಮತ್ತು ಕಾರಾಗೃಹಗಳ ಸೇವೆಗಳು ಮುಂದುವರಿಯಲಿವೆ. ಇದಲ್ಲದೆ ಜಿಲ್ಲಾಡಳಿತ, ಖಜಾನೆ, ವಿದ್ಯುತ್, ನೀರು, ನೈರ್ಮಲ್ಯ ಸಂಬಂಧಿತ ಸೇವೆಗಳು ಲಭ್ಯವಿರಲಿವೆ. ಈ ಕಚೇರಿಗಳಲ್ಲಿ ಕನಿಷ್ಠ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದು, ಉಳಿದ ಎಲ್ಲಾ ಅಧಿಕಾರಿಗಳು ಮನೆಯಿಂದ ಮಾತ್ರ ಕೆಲಸ ಮಾಡಬಹುದು.
ಗೃಹ ಸಚಿವಾಲಯದ ಆದೇಶದಂತೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಹಾಗೂ ಔಷಧಿ ಉತ್ಪಾದನಾ ಮತ್ತು ವಿತರಣಾ ಘಟಕಗಳಿಗೆ ಸಂಬಂಧಿಸಿದ್ದವು ತೆರೆದಿರಲಿವೆ. ವೈದ್ಯಕೀಯ, ಪ್ಯಾರಾ ವೈದ್ಯಕೀಯ ಮತ್ತು ಆಸ್ಪತ್ರೆ ಸಿಬ್ಬಂದಿಗೆ ಸಾರಿಗೆ ಓಡಾಟಕ್ಕೆ ಅನುಮತಿ ನೀಡಲಾಗಿದೆ.
ಎಲ್ಲಾ ರೀತಿಯ ವಾಣಿಜ್ಯ ಮತ್ತು ಖಾಸಗಿ ಸಂಸ್ಥೆಗಳನ್ನು ಮುಚ್ಚಲು ಆದೇಶಿಸಲಾಗಿದೆ.
ಬ್ಯಾಂಕುಗಳು, ಎಟಿಎಂಗಳು, ವಿಮಾ ಕಂಪನಿಗಳ ಕಚೇರಿಗಳು ತೆರೆದಿರುತ್ತವೆ. ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದ ಸ್ಥಾಪನೆಗಳು ಮುಕ್ತವಾಗಿರುತ್ತವೆ. ಟೆಲಿಕಾಂ, ಇಂಟರ್ನೆಟ್ ಸೇವೆ, ಪ್ರಸಾರ ಮತ್ತು ಕೇಬಲ್ ಸೇವೆಗಳು, ಐಟಿ ಮತ್ತು ಐಟಿ ಸಂಬಂಧಿತ ಸೇವೆಗಳಲ್ಲಿರುವವರಿಗೆ ಸಾಧ್ಯವಾದಷ್ಟು ಮನೆಗಳಿಂದ ಕೆಲಸ ಮಾಡುವಂತೆ ಸೂಚಿಸಲಾಗಿದೆ.
ಆಹಾರ ವಸ್ತುಗಳು, ಔಷಧಿಗಳು, ವೈದ್ಯಕೀಯ ಉಪಕರಣಗಳು ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳನ್ನು ಇ-ಕಾಮರ್ಸ್ ಮೂಲಕ ವಿತರಿಸಲಾಗುವುದು. ಪೆಟ್ರೋಲ್ ಪಂಪ್‌ಗಳು, ಎಲ್‌ಪಿಜಿ, ಪೆಟ್ರೋಲಿಯಂ ಮತ್ತು ಅನಿಲ ಚಿಲ್ಲರೆ ಮಾರಾಟ ಮಳಿಗೆಗಳು ತೆರೆದಿರುತ್ತವೆ.