ನವದೆಹಲಿ: ಭಾರತ ಈಗಲೂ ವೇಗದ ಆರ್ಥಿಕ ರಾಷ್ಟ್ರ ಮತ್ತು ಡಿಮಾನಿಟೈಸೇಷನ್ ದೇಶದ ಆರ್ಥಿಕತೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.
ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಪ್ರತಿಪಕ್ಷಗಳ ಸವಾಲುಗಳಿಗೆ ಉತ್ತರಿಸಿ ಮಾತನಾಡಿದ ಅವರು, ಉತ್ಪಾದನಾ ಕ್ಷೇತ್ರದಲ್ಲಿ ಅಲ್ಪ ಹಿನ್ನೆಡೆ ಕಂಡುಬಂದಿದೆ. ಆದರೆ, ಇದಕ್ಕೆ ನೋಟು ರದ್ದತಿಯೇ ಕಾರಣವೆಂದು ಹೇಳಲಾಗುವುದಿಲ್ಲ ಎಂದರು.
2018-19ರ ಹಣಕಾಸು ವರ್ಷದಲ್ಲಿ ಕೃಷಿ, ವಾಣಿಜ್ಯ, ಹೋಟೆಲ್, ಸಾರಿಗೆ, ಸಂಸ್ಕರಣ, ಸಂಪರ್ಕ ಮತ್ತು ಸೇವಾ ವಲಯಗಳ ಮೇಲೆ ಅಲ್ಪ ಪರಿಣಾಮ ಉಂಟಾಗಿದೆ. ಕೆಲವು ಕ್ಷೇತ್ರಗಳ ಮೇಲೆ ಪ್ರಭಾವ ಬೀರಿದ್ದರಿಂದ ಬೆಳವಣಿಗೆ ದರದಲ್ಲಿ ಕುಂಠಿತವಾಗಿದೆ. ಮುಖ್ಯವಾಗಿ ಕೃಷಿ ಹಾಗೂ ಕೃಷಿ ಸಂಬಂಧಿ ಕ್ಷೇತ್ರಗಳು, ಹಣಕಾಸು ಮತ್ತು ರಿಯಲ್ ಎಸ್ಟೇಟ್, ವೃತ್ತಿಪರ ಸೇವಾ ಕ್ಷೇತ್ರಗಳೂ ಇದರಲ್ಲಿ ಒಳಗೊಂಡಿವೆ ಎಂದರು.
ಅಮೆರಿಕದ ಆರ್ಥಿಕ ಬೆಳವಣಿಗೆಯ ದರವು 2016, 2017, 2018 ಮತ್ತು 2019ರಲ್ಲಿ ಕ್ರಮವಾಗಿ ಶೇ 1.6, 2.2, 2.9 ಮತ್ತು 2.3ರಷ್ಟಿದೆ. ಜೊತೆಗೆ ಚೀನಾದ ಬೆಳವಣಿಗೆ ಕೂಡ ಈ ನಾಲ್ಕು ವರ್ಷಗಳಲ್ಲಿ ಶೇ 6.7, 6.8, 6.6 ಮತ್ತು 6.3 ಪ್ರತಿಶತವಿದೆ. ಆದರೆ, ಭಾರತದಲ್ಲಿ ಶೇ 7ಕ್ಕೂ ಅಧಿಕವಾಗಿದ್ದು, ಪ್ರಸ್ತುತ ಶೇ 7.3ರಷ್ಟಿದೆ ಎಂದು ಸೀತಾರಾಮನ್ ತಿಳಿಸಿದ್ದಾರೆ.