ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ- ವಹಿವಾಟಿಗೆ ಸಂಬಂಧಿತ ವ್ಯಾಜ್ಯಗಳ ಪರಿಹಾರದ ಬಗ್ಗೆ ಉಭಯ ರಾಷ್ಟ್ರಗಳ ಪ್ರಮುಖರು ಚರ್ಚಿಸಿದ್ದಾರೆ. ಇದರ ಜೊತೆಗೆ ಮನಿ ಲಾಂಡರಿಂಗ್ ನಿಭಾಯಿಸುವ ಮತ್ತು ಭಯೋತ್ಪಾದನೆಗೆ ಹಣಕಾಸಿನ ನೆರವಿನ ವಿರುದ್ಧ ಜಂಟಿಯಾಗಿ ಹೋರಾಡಲು ಸಹಮತ ವ್ಯಕ್ತಪಡಿಸಿದ್ದಾರೆ.
ಭಾರತ - ಅಮೆರಿಕದ ಆರ್ಥಿಕ ಹಾಗೂ ಆರ್ಥಿಕ ಸಹಭಾಗಿತ್ವದ 7ನೇ ಸಭೆಯಲ್ಲಿ ಎರಡೂ ರಾಷ್ಟ್ರಗಳ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ನೀತಿಗಳು, ಸಾರ್ವಜನಿಕ ವಲಯದ ಬ್ಯಾಂಕ್ಗಳ ಮರು ಬಂಡವಾಳೀಕರಣ ಮತ್ತು ಕೆಲವು ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ವಿಲೀನಗೊಳಿಸುವ ಯೋಜನೆ ಸೇರಿದಂತೆ ಇತರ ಹಣಕಾಸು ವಲಯಗಳನ್ನು ಬಲಪಡಿಸಲು ಭಾರತ ತೆಗೆದುಕೊಂಡು ನಿರ್ಧಾರಗಳನ್ನು ಅಮೆರಿಕ ಗಂಭೀರವಾಗಿ ಗಮನಿಸಿತ್ತು.
ಬಂಡವಾಳ ಹರಿವು, ಹೂಡಿಕೆ ಉತ್ತೇಜನ ಸಂಬಂಧಿತ ವಿಷಯಗಳು ಮತ್ತು ಬಾಹ್ಯ ಆರ್ಥಿಕ ವಾತಾವರಣದ ಬಗ್ಗೆಯೂ ಎರಡೂ ಕಡೆಯವರು ಚರ್ಚಿಸಿದರು. ಭಾರತೀಯ ನಿಯೋಗವನ್ನು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ನೇತೃತ್ವ ವಹಿಸಿದ್ದರೇ ಅಮೆರಿಕದ ನಿಯೋಗವನ್ನು ಯುಎಸ್ ಖಜಾನೆಯ ಕಾರ್ಯದರ್ಶಿ ಸ್ಟೀವನ್ ಮ್ಯೂಚಿನ್ ನೇತೃತ್ವ ವಹಿಸಿದ್ದರು.
ನಮ್ಮ ಸಹಕಾರವು ಜಾಗತಿಕ ಭಯೋತ್ಪಾದಕರಿಗೆ ಹಣಕಾಸಿನ ನೆರವು ಕಡಿತ, ಅವರಿಗೆ ಫಂಡಿಂಗ್ ಮಾಡುವವರ ಹೆಸರು ಬಹಿರಂಗ, ಉಗ್ರರ ಹಣಕಾಸು ಚಟುವಟಿಕೆಗಳಿಗೆ ಸಂಬಂಧಿಸಿದ ಅಕ್ರಮ ಹಣ ಲೇವಾದೇವಿ ಮತ್ತು ಭಯೋತ್ಪಾದನೆಗೆ ಹಣ ವರ್ಗಾವಣೆ (ಎಎಂಎಲ್-ಸಿಎಫ್‌ಟಿ) ನಿಗ್ರಹಕ್ಕೆ ಸಹಕಾರ ನೀಡಲಿದೆ. ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ನ (ಎಫ್‍ಎಟಿಎಫ್) ಜಾಗತಿಕ ಮಾನದಂಡಗಳ ಸಮಗ್ರತೆಗೆ ಬದ್ಧರಾಗಿರುವುದು. ಈ ನಿಯಮಗಳನ್ನು ಅನುಸರಿಸದ ದೇಶಗಳ ವಿರುದ್ಧ ಕ್ರಮಕೈಗೊಳ್ಳುವ ಭಾರತಕ್ಕೆ ಬೆಂಬಲವಾಗಿ ನಿಲ್ಲಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಅಮೆರಿಕ ತಿಳಿಸಿದೆ.