ನೀರು, ಗಡಿ, ಅಕ್ರಮ ನುಸುಳುವಿಕೆ, ಭಯೋತ್ಪಾದನೆ, ಯುದ್ಧ ಮುಂತಾದ ಕಾರಣಗಳಿಗಾಗಿ ಎರಡು ದೇಶಗಳ ಮಧ್ಯೆ ವಿವಾದ ಹುಟ್ಟಿಕೊಂಡಾಗ ಎರಡೂ ದೇಶಗಳು ಪರಸ್ಪರ ವ್ಯಾಪಾರಕ್ಕೆ ಬಹಿಷ್ಕಾರ ವಿಧಿಸುವುದು ಹೊಸದೇನಲ್ಲ. ಇಂಥ ಹಲವಾರು ಪ್ರಸಂಗಗಳು ನಡೆದು ಹೋಗಿದ್ದು, ಈಗಲೂ ನಡೆಯುತ್ತಲೇ ಇವೆ. ದೇಶವೊಂದು ಮತ್ತೊಂದು ದೇಶಕ್ಕೆ ಶಿಕ್ಷೆ ನೀಡುವ ವಿಧಾನವೆಂದು ಇದನ್ನು ಪರಿಗಣಿಸಲಾಗುತ್ತದೆ. ವಿಶ್ವದ ಯಾವ್ಯಾವ ಪ್ರಮುಖ ರಾಷ್ಟ್ರಗಳ ಮಧ್ಯೆ ವ್ಯಾಪಾರ ಬಹಿಷ್ಕಾರದ ಘಟನೆಗಳು ನಡೆದಿವೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ:
ಚೀನಾ ಮತ್ತು ಜಪಾನ್ ಮಧ್ಯದ ವ್ಯಾಪಾರ ಬಹಿಷ್ಕಾರ
- 1908 ರ ಮಾರ್ಚ್ನಿಂದ ನವೆಂಬರ್ವರೆಗೆ: ತಾತ್ಸು ಮಾರು ವಿಷಯ
- 1909 ರ ಆಗಸ್ಟ್ ನಿಂದ ಅಕ್ಟೋಬರ್ವರೆಗೆ: ಆಂಟುಂಗ್ - ಮುಕ್ಡೆನ್ ರೈಲ್ವೆ ಮಾರ್ಗ ಪ್ರಕರಣ
- 1915 ರ ಮೇ ನಿಂದ ಅಕ್ಟೋಬರ್ವರೆಗೆ: ಚೀನಾ - ಜಪಾನ್ ದ್ವಿಪಕ್ಷೀಯ ಮಾತುಕತೆ ವಿಷಯ
- 1919 ರ ಮೇ ನಿಂದ ಡಿಸೆಂಬರ್ವರೆಗೆ: ಶಾಂಟುಂಗ್ ವಿವಾದಕ್ಕಾಗಿ
- 1923 ರ ಏಪ್ರಿಲ್ ನಿಂದ ಆಗಸ್ಟ್ವರೆಗೆ: ಪೋರ್ಟ್ ಆರ್ಥರ್ ಮತ್ತು ಡೇರಿಯನ್ಗಳ ಸ್ವಾಧೀನ ವಿವಾದ
ಚೀನಾ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ಮಧ್ಯದ ವ್ಯಾಪಾರ ಬಹಿಷ್ಕಾರ
- ಪಾಶ್ಚಿಮಾತ್ಯ ದೇಶಗಳ ಉತ್ಪನ್ನಗಳನ್ನು ತನ್ನ ನೆಲದಲ್ಲಿ ಮಾರಾಟವಾಗಲು ಬಿಡದ ಚೀನಾ ನೀತಿಯ ಹಿಂದೆ ಅದರ ತೀವ್ರ ರಾಷ್ಟ್ರೀಯವಾದಿ ಧೋರಣೆಯೇ ಕಾರಣವಾಗಿದೆ. ಇಸ್ವಿ 1900 ರಿಂದ 1940 ರ ಮಧ್ಯೆ ಚೀನಾ ಜನತೆ ಹಾಗೂ ಉದ್ಯಮಿಗಳು ಪಾಶ್ಚಿಮಾತ್ಯ ಉತ್ಪನ್ನಗಳಿಗೆ ಸಂಪೂರ್ಣ ಬಹಿಷ್ಕಾರ ವಿಧಿಸಿದ್ದರು.
- ಅಮೆರಿಕದ ವಸ್ತುಗಳಿಗೆ 1905 ರಲ್ಲಿ ಚೀನಾ ಸಂಪೂರ್ಣ ಬಹಿಷ್ಕಾರ ಹಾಕಿತು. ತನ್ನ ದೇಶದ ನಾಗರಿಕರನ್ನು ಅಮೆರಿಕ ಸರಿಯಾಗಿ ನಡೆಸಿಕೊಂಡಿಲ್ಲ ಹಾಗೂ ಅವರಿಗೆ ಕಿರುಕುಳ ನೀಡುತ್ತಿರುವ ಆರೋಪದಲ್ಲಿ ಚೀನಾ ಈ ಕ್ರಮಕ್ಕೆ ಮುಂದಾಗಿತ್ತು.
- 1925 ರಿಂದ 26 ರ ಮಧ್ಯೆ ಚೀನಾ ಎಲ್ಲ ಬ್ರಿಟಿಷ್ ರಾಷ್ಟ್ರಗಳ ಉತ್ಪನ್ನಗಳನ್ನು ನಿರ್ಬಂಧಿಸಿತ್ತು. ಬ್ರಿಟನ್ ಚೀನಾ ಮೇಲೆ ರಾಜಕೀಯವಾಗಿ ಮೇಲುಗೈ ಸಾಧಿಸುವುದನ್ನು ತಡೆಯುವುದು ಚೀನಾ ಉದ್ದೇಶವಾಗಿತ್ತು.
ನಾಝಿಗಳ ವಿರುದ್ಧ ಜಾಗತಿಕ ಬಹಿಷ್ಕಾರ
- 1933 ರ ಮಾರ್ಚ್ 5 ರಂದು ಜರ್ಮನಿಯಲ್ಲಿ ನಾಝಿ ಪಕ್ಷದ ಜಯದ ನಂತರ, ಯಹೂದಿಗಳ ಮೇಲೆ ನಾಝಿಗಳ ಹಿಂಸಾಚಾರ ಖಂಡಿಸಿ ವಿಶ್ವಾದ್ಯಂತ ಯಹೂದಿಗಳು ಪ್ರತಿಭಟನೆ ರ್ಯಾಲಿಗಳನ್ನು ನಡೆಸಿದ್ದರು. ಈ ಪ್ರತಿಭಟನೆಗಳ ನಂತರ ವಿಶ್ವಾದ್ಯಂತ ನಾಝಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿ ಅದೇ ವರ್ಷದ ಏ.1 ರಂದು ನಾಝಿ ವಿರುದ್ಧ ಜಾಗತಿಕ ಬಹಿಷ್ಕಾರ ಆಚರಿಸಲಾಗಿತ್ತು.
ಇಸ್ರೇಲ್ ವಸ್ತುಗಳ ವಿರುದ್ಧ ಅರಬ್ ಲೀಗ್ ಬಹಿಷ್ಕಾರ
1945 ರ ಡಿಸೆಂಬರ್ 2 ರಂದು ನೂತನವಾಗಿ ರಚಿಸಲಾದ ಅರಬ್ ರಾಷ್ಟ್ರಗಳ ಒಕ್ಕೂಟ ಅರಬ್ ಲೀಗ್, ಇಸ್ರೇಲ್ನಲ್ಲಿ ತಯಾರಾದ ವಸ್ತುಗಳಿಗೆ ಸಂಪೂರ್ಣ ನಿಷೇಧ ಹೇರಿತು. ಇಸ್ರೇಲ್ನಲ್ಲಿ ತಯಾರಾದ ವಸ್ತುಗಳಿಗೆ ಅರಬ್ ರಾಷ್ಟ್ರಗಳಲ್ಲಿ ಯಾವುದೇ ಸ್ಥಾನವಿಲ್ಲ ಎಂದು ಅರಬ್ ಲೀಗ್ ಘೋಷಿಸಿತು.