ನವದೆಹಲಿ: ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಹೀರೋ ಮೊಟೊಕಾರ್ಪ್, ಸೋಮವಾರ ತನ್ನ ಮೂರು ಉತ್ಪಾದನಾ ಘಟಕಗಳಲ್ಲಿ ಉತ್ಪಾದನಾ ಕಾರ್ಯವನ್ನು ಪುನರಾರಂಭಿಸಿದೆ. ಇದೇ ಬುಧವಾರದಿಂದ ಇದರ ಉತ್ಪನ್ನ ಹೊರಬರಲಿದೆ.
ಕಂಪನಿಯು ತನ್ನ ಮೂರು ಉತ್ಪಾದನಾ ಘಟಕಗಳಾದ ಹರಿಯಾಣದ ಗುರುಗ್ರಾಮ್ ಮತ್ತು ಧರುಹೆರಾ, ಉತ್ತರಾಖಂಡ್ನ ಹರಿದ್ವಾರದಲ್ಲಿ ಶ್ರೇಣೀಕೃತ ರೀತಿಯಲ್ಲಿ ಉತ್ಪಾದನಾ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಿದೆ ಎಂದು ಹೀರೋ ಮೊಟೊಕಾರ್ಪ್ ಪ್ರಕಟಣೆಯಲ್ಲಿ ತಿಳಿಸಿದೆ.
ಇದರೊಂದಿಗೆ, ರಾಜಸ್ಥಾನದ ನೀಮ್ರಾನಾದಲ್ಲಿರುವ ಕಂಪನಿಯ ಗ್ಲೋಬಲ್ ಪಾರ್ಟ್ಸ್ ಸೆಂಟರ್ (GPC) ಸಹ ಕಾರ್ಯಾಚರಣೆಯನ್ನು ಪುನರಾರಂಭಿಸಿದೆ.
ದೇಶದ ಹಲವೆಡೆ ಸರ್ಕಾರ ಲಾಕ್‌ಡೌನ್ ಸಡಿಲಿಸಿರುವುದರಿಂದ, ಸ್ಥಳೀಯ ಅಧಿಕಾರಿಗಳು ನೀಡಿದ ಅನುಮತಿಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ.