ನವದೆಹಲಿ: ಗೂಗಲ್ ಪೇ ಮೂರನೇ ವ್ಯಕ್ತಿಯ ಆ್ಯಪ್ ಪ್ರೊವೈಡರ್ (ಟಿಪಿಎಪಿ) ಮತ್ತು ಯಾವುದೇ ಪಾವತಿ ವ್ಯವಸ್ಥೆ ನಿರ್ವಹಿಸುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ಗೂಗಲ್ ಪೇ ಕಾರ್ಯಾಚರಣೆಗಳು 2007ರ ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಯ ಕಾಯ್ದೆ ಉಲ್ಲಂಘಿಸಿಲ್ಲ ಎಂದು ಆರ್‌ಬಿಐ, ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಪ್ರತೀಕ್ ಜಲನ್ ಅವರಿದ್ದ ನ್ಯಾಯಪೀಠಕ್ಕೆ ತಿಳಿಸಿದೆ.
ಗೂಗಲ್ ಪೇ ಯಾವುದೇ ಪಾವತಿ ವ್ಯವಸ್ಥೆಯನ್ನು ನಿರ್ವಹಿಸುವುದಿಲ್ಲ. ಹೀಗಾಗಿ, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಪ್ರಕಟಿಸಿದ ಅಧಿಕೃತ ಪಾವತಿ ವ್ಯವಸ್ಥೆಯ ನಿರ್ವಾಹಕರ ಪಟ್ಟಿಯಲ್ಲಿ ಅದು ಸ್ಥಾನ ಪಡೆಯುವುದಿಲ್ಲ ಎಂದು ಆರ್‌ಬಿಐ ನ್ಯಾಯಾಲಯಕ್ಕೆ ಮನವರಿಕೆ ಮಾಡಿದೆ.
ರಿಸರ್ವ್ ಬ್ಯಾಂಕ್ 2019ರ ಮಾರ್ಚ್ 20ರಂದು ಬಿಡುಗಡೆ ಮಾಡಿದ ಅಧಿಕೃತ ಪಾವತಿ ಸಿಸ್ಟಂ ಆಪರೇಟರ್ ಪಟ್ಟಿಯಲ್ಲಿ ಗೂಗಲ್ ಪೇ ಸ್ಥಾನ ಪಡೆಯದಿರುವ ಬಗ್ಗೆ ಅಭಿಜಿತ್ ಮಿಶ್ರಾ ಎಂಬುವವರು ಕೋರ್ಟ್ಗೆ ಪಿಐಎಲ್ ಸಲ್ಲಿಸಿದ್ದರು.
ಗೂಗಲ್‌ನ ಮೊಬೈಲ್ ಪಾವತಿ ಅಪ್ಲಿಕೇಷನ್ ಗೂಗಲ್ ಪೇ ಅಥವಾ ಜಿಪಿ ಆರ್‌ಬಿಐನಿಂದ ಅಗತ್ಯವಾದ ಅನುಮತಿಯಿಲ್ಲದೆ ಹಣಕಾಸಿನ ವಹಿವಾಟು ನಡೆಸುತ್ತಿದೆ ಎಂದು ಆರೋಪಿಸಲಾಗಿತ್ತು.
ಪಾವತಿ ಮತ್ತು ಇತ್ಯರ್ಥ ಕಾಯ್ದೆ ಉಲ್ಲಂಘಿಸಿ ಜಿಪಿ ಪಾವತಿ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ. ಇಂತಹ ಕಾರ್ಯ ನಿರ್ವಹಿಸಲು ದೇಶದ ಕೇಂದ್ರ ಬ್ಯಾಂಕಿನಿಂದ ಯಾವುದೇ ಮಾನ್ಯತೆ ಇಲ್ಲ ಎಂದು ಮಿಶ್ರಾ ಹೇಳಿದ್ದಾರೆ.
ಇತರ ಮೂರನೇ ವ್ಯಕ್ತಿಯ ಅಪ್ಲಿಕೇಷನ್‌ಗಳ ಮೇಲೆ ಪರಿಣಾಮ ಬೀರಲಿದೆ. ಈ ಬಗ್ಗೆ ವಿವರವಾದ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಕೋರ್ಟ್ ಜುಲೈ 22 ಕ್ಕೆ ವಿಚಾರಣೆ ಮುಂದೂಡಿತು.
ಈ ಹಿಂದಿನ 2019ರ ಏಪ್ರಿಲ್ ವಿಚಾರಣೆಯಂದು, 'ಎಲ್ಲ ಕಾನೂನುಬದ್ಧ ಅಗತ್ಯಗಳನ್ನು ಗೂಗಲ್ ಪೇ ಪೂರೈಸಿದೆ. ಬ್ಯಾಂಕ್‌ಗಳಿಗೆ ತಂತ್ರಜ್ಞಾನ ಸೇವೆ ಒದಗಿಸುವ ಮೂಲಕ ಸಹಭಾಗಿತ್ವದ ರೀತಿಯಲ್ಲಿ ಗೂಗಲ್ ಪೇ ಕಾರ್ಯನಿರ್ವಹಿಸುತ್ತದೆ. ಹಣ ಪಾವತಿಸುವ ಅಥವಾ ಇತ್ಯರ್ಥಗೊಳಿಸುವ ಭಾಗವಾಗಿ ಕಾರ್ಯನಿರ್ವಹಿಸುವುದಿಲ್ಲ' ಎಂದು ಗೂಗಲ್ ಇಂಡಿಯಾ ಸ್ಪಷ್ಟನೆ ನೀಡಿತ್ತು.