ನವದೆಹಲಿ : ಜಿಎಸ್‌ಟಿ ನಷ್ಟ ಪರಿಹಾರದ ಕೊರತೆ ನೀಗಿಸಲು ಹಣಕಾಸು ಸಚಿವಾಲಯವು 16ನೇ ಸುತ್ತಿನ ಕಂತಿನಡಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 6,000 ಕೋಟಿ ರೂ. ಬಿಡುಗಡೆ ಮಾಡಿದೆ. ಇದುವರೆಗೂ ಹಂಚಿಕೆ ಮಾಡಲಾದ ಒಟ್ಟು ಮೊತ್ತ 95,000 ಕೋಟಿ ರೂ.ಗಳಷ್ಟಾಗಿದೆ.
ಈವರೆಗೆ ಜಿಎಸ್‌ಟಿ ಪರಿಹಾರದ ಕೊರತೆಯ ಶೇ.86ರಷ್ಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ (ಯುಟಿ) ಬಿಡುಗಡೆ ಮಾಡಲಾಗಿದೆ. ರಾಜ್ಯಗಳಿಗೆ 86,729.93 ಕೋಟಿ ರೂ. ಹಾಗೂ ದೆಹಲಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳಿಗೆ 8,270.07 ರೂ. ನೀಡಲಾಗಿದೆ.
ಜಿಎಸ್‌ಟಿ ಅನುಷ್ಠಾನದಿಂದ ಉಂಟಾದ ಆದಾಯದ 1.10 ಲಕ್ಷ ಕೋಟಿ ರೂ. ಕೊರತೆ ನೀಗಿಸಲು ಕೇಂದ್ರವು 2020ರ ಅಕ್ಟೋಬರ್‌ನಲ್ಲಿ ವಿಶೇಷ ಸಾಲ ಪಡೆಯುವ ವಿಂಡೋ ಸ್ಥಾಪಿಸಿತ್ತು. ರಾಜ್ಯಗಳು ಮತ್ತು ಯುಟಿಗಳ ಪರವಾಗಿ ಕೇಂದ್ರವು ಎರವಲು ಪಡೆದು ನೀಡುತ್ತಿದೆ.
ಇದನ್ನೂ ಓದಿ: ಮಧ್ಯರಾತ್ರಿಯಿಂದ ಫಾಸ್ಟ್ಟ್ಯಾಗ್ ಕಡ್ಡಾಯ.. ಬೆರಳ ತುದಿಯಲ್ಲಿ ಪಾವತಿ, ನೋಂದಣಿಯ ಕಂಪ್ಲೀಟ್ ಮಾಹಿತಿ..
ಜಿಎಸ್‌ಟಿ ಪರಿಹಾರದ ಕೊರತೆ ಪೂರೈಸಲು 16ನೇ ವಾರದ ಕಂತಿನಡಿ 6,000 ಕೋಟಿ ರೂ. ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಈ ವಾರ ಶೇ.4.64ರಷ್ಟು ಬಡ್ಡಿದರದಲ್ಲಿ ಎರವಲು ಪಡೆಯಲಾಗಿದೆ. ಈವರೆಗೆ, ಕೇಂದ್ರ ಸರ್ಕಾರವು ವಿಶೇಷ ಸಾಲ ಪಡೆಯುವ ವಿಂಡೋ ಮೂಲಕ ಸರಾಸರಿ 95,000 ಕೋಟಿ ರೂ.ಯನ್ನು ಸರಾಸರಿ ಶೇ.4.7831 ಬಡ್ಡಿದರದಲ್ಲಿ ಎರವಲು ಪಡೆಯಲಾಗಿದೆ ಎಂದಿದೆ.