ನವದೆಹಲಿ: ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಗೆ ಸೇರಿದ 1,350 ಕೋಟಿ ರೂ.ಗಳ ಮೌಲ್ಯದ 2,300 ಕೆಜಿ ಪಾಲಿಶ್ ವಜ್ರಗಳು, ಮುತ್ತು ಹಾಗೂ ಬೆಳ್ಳಿ ಆಭರಣಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಹಾಕಾಂಗ್ನಿಂದ ಭಾರತಕ್ಕೆ ವಾಪಸ್ ತಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈಗೆ ತರಲಾದ 108 ಸರಕುಗಳಲ್ಲಿ 32 ವಸ್ತುಗಳು ಸಾಗರೋತ್ತರ ಘಟಕಗಳಿಗೆ ಸೇರಿದ್ದು, ನೀರವ್ ಮೋದಿ ಅವರ ನಿಯಂತ್ರಣಕ್ಕೆ ಒಳಪಟ್ಟಿದ್ದವು. ಉಳಿದವುಗಳು ಮೆಹುಲ್ ಚೋಕ್ಸಿ ಸಂಸ್ಥೆಗೆ ಸೇರಿದ್ದವು.
ಮುಂಬೈನ ಪಿಎನ್‌ಬಿ ಶಾಖೆಯೊಂದರಲ್ಲಿ 2 ಬಿಲಿಯನ್ ಅಮೆರಿಕ ಡಾಲರ್‌ಗಿಂತಲೂ ಹೆಚ್ಚು ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಉದ್ಯಮಿಗಳನ್ನು ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ತನಿಖೆ ನಡೆಸಲಾಗುತ್ತಿದೆ.
ಬೆಲೆಬಾಳುವ ವಸ್ತುಗಳಾದ ಪಾಲಿಶ್ ವಜ್ರಗಳು, ಮುತ್ತುಗಳು ಮತ್ತು ಬೆಳ್ಳಿ ಆಭರಣಗಳನ್ನು ಒಳಗೊಂಡಿದ್ದು ಇವುಗಳ ಒಟ್ಟಾರೆ ಮೌಲ್ಯ 1,350 ಕೋಟಿ ರೂ.ಯಷ್ಟಿದೆ. ಈ ಅಮೂಲ್ಯ ವಸ್ತುಗಳನ್ನು ಮರಳಿ ತರಲು ಹಾಂಗ್ಕಾಂಗ್ನ ಅಧಿಕಾರಿಗಳಳ ಜತೆ ಇಡಿ, ಕಾನೂನಿನ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.
ಇವುಗಳನ್ನು ಈಗ ಪಿಎಂಎಲ್‌ಎ ಅಡಿಯಲ್ಲಿ ಔಪಚಾರಿಕವಾಗಿ ವಶಪಡಿಸಿಕೊಳ್ಳಲಾಗುವುದು ಎಂದು ಹೇಳಿದೆ.