ಮುಂಬೈ: ಅಕ್ರಮವಾಗಿ ಚಿನ್ನ ಕಳ್ಳಸಾಗಿಸುತ್ತಿದ್ದ ಜಾಲವನ್ನು ಆದಾಯ ಇಲಾಖೆ ತನಿಖಾ ನಿರ್ದೇಶನಾಲಯದ (ಡಿಆರ್ಐ) ಅಧಿಕಾರಿಗಳ ತಂಡ ಬೇಧಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 110 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳುವ ಮೂಲಕ ಚಿನ್ನ ಕಳ್ಳಸಾಗಣೆಯ ದೊಡ್ಡ ಜಾಲವನ್ನು ಹೆಡೆಮುರಿ ಕಟ್ಟಿದ್ದಾರೆ. ಚಿನ್ನ ಕಳ್ಳಸಾಗಣೆಯಲ್ಲಿ ಏಳು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕಳ್ಳಸಾಗಣೆಯಲ್ಲಿ ತಂದ ಚಿನ್ನವನ್ನು ಸರಗಳನ್ನಾಗಿ ಮಾಡಿ ಜ್ಯುವೆಲ್ಲರ್ಸ್ ಮಳಿಗೆಗೆ ಮಾರುತ್ತಿದ್ದರು. ಈ ಹಣವನ್ನು ಹವಾಲಾ ಜಾಲದ ಮೂಲಕ ದುಬೈಗೆ ಕಳುಹಿಸುವುದಾಗಿ ಆರೋಪಿಗಳು ತಪ್ಪೊಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಅಮೆರಿಕ, ಕೇರಳದಲ್ಲಿ ಹಲವಾರು ಕಂಪನಿಗಳ ಮಾಲೀಕನಾಗಿರುವ ಕೋಟ್ಯಧೀಶ ಉದ್ಯಮಿ ನಿಸಾರ್ ಅಲಿಯಾರ್ (43) ಸಹ ಬಂಧಿತರಾಗಿದ್ದಾರೆ.
ಶೋಯೆಬ್ ಮೆಹಮೂದ್ ಝೋರಾದಾರ್ ವಾಲಾ (47), ಆತನ ಮಗ ಅಬ್ದುಲ್ ಝೋರಾದಾರ್ ವಾಲಾ (26), ಝವೇರಿ ಬಜಾರ್ ಜ್ಯುವೆಲ್ಲರ್ಸ್ನ ಮನೋಜ್ ಗಿರಿಧರ್ ಲಾಲ್ ಜೈನ್(32), ಹ್ಯಾಪಿ ಅರವಿಂದ್ ಕುಮಾರ್ ಧಾಕಾಡ್ (34), ಹವಾಲಾ ಆಪರೇಟರ್ ಅಕ್ವಿಲ್ ಫ್ರೂಟ್ ವಾಲಾ (39) ಮತ್ತು ಝೋರಾದಾರ್ ವಾಲಾ ಸಿಬ್ಬಂದಿ ಶೇಕ್ ಅಬ್ದುಲ್ ಅಹದ್ (32) ಇತರೆ ಬಂಧಿತ ಆರೋಪಿಗಳಾಗಿದ್ದಾರೆ.