ನವದೆಹಲಿ: ಬ್ಯಾಂಕ್‌ಗಳಲ್ಲಿ ದ್ರವ್ಯತೆ (ನಗದು) ಇದೆ. ಆದರೆ ಕೊರೊನಾ ವೈರಸ್ ಬಿಕ್ಕಟ್ಟಿನ ನಡುವೆ ಖಾಸಗಿ ವಲಯದಿಂದ ಯಾವುದೇ ಸಾಲದ ಬೇಡಿಕೆಗಳಿಲ್ಲ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಸಾಲ ನೀಡುವವರು ತಮ್ಮ ಸಾಲ ನೀಡುವ ನಿರ್ಧಾರಗಳ ಬಗ್ಗೆ ವಿವೇಕಯುತವಾಗಿರಬೇಕು. ಅಜಾಗರುಕತೆಯಿಂದ ನಿರ್ಧಾರ ತೆಗೆದುಕೊಳ್ಳುಲು ಸಾಧ್ಯವಿಲ್ಲ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉಪ ವ್ಯವಸ್ಥಾಪಕ ನಿರ್ದೇಶಕ (ಕಾರ್ಪೊರೇಟ್ ಹಣಕಾಸು) ಸುಜಿತ್ ವರ್ಮಾ ವೆಬ್ನಾರ್ನಲ್ಲಿ ಹೇಳಿದ್ದಾರೆ.
ಎಸ್‌ಬಿಐ ಅತಿದೊಡ್ಡ ಬ್ಯಾಂಕ್ ಆಗಿರುವುದರಿಂದ ಎಲ್ಲೆಲ್ಲಿ ಬ್ಯಾಂಕಿಂಗ್ ಪ್ರಸ್ತಾಪವಿದೆಯೋ ಅಲ್ಲೆಲ್ಲಾ ಧನಸಹಾಯ ನೀಡಲು ಸಿದ್ಧರಿದ್ದೇವೆ. ಅದನ್ನು ನಾವು ಹೇಳುತ್ತಲೇ ಇರುತ್ತೇವೆ. ದೇಶದ ಒಟ್ಟಾರೆ ಆರ್ಥಿಕತೆ ಮತ್ತು ವಿವಿಧ ಕೈಗಾರಿಕೆಗಳಿಗೆ ಸದಾ ಬೆಂಬಲವಾಗಿ ನಿಲ್ಲುತ್ತೇವೆ ಎಂದು ಭರವಸೆ ನೀಡಿದರು.
ಉದ್ಯಮಗಳಲ್ಲಿ ಹೊಸ ಹೂಡಿಕೆಯ ಕೊರತೆ ಎದುರಾಗಿದೆ. ದುಡಿಯುವ ಬಂಡವಾಳದ ಹೊರತಾಗಿ ಕಂಪನಿಗಳು ಹೊಸ ಹೂಡಿಕೆಗಾಗಿ ಬ್ಯಾಂಕ್‌ಗಳನ್ನು ಸಂಪರ್ಕಿಸುತ್ತಿಲ್ಲ. ಆದರೆ, ಬ್ಯಾಂಕ್‌ಗಳ ಬಳಿ ಸಾಕಷ್ಟು ನಗದು ಲಭ್ಯವಿದೆ ಎಂದಿದ್ದಾರೆ.