ಮಂಗಳೂರು: ಸಾಮಾನ್ಯವಾಗಿ ನಮ್ಮ ನೆರಳು ಬೆಳಗ್ಗೆ ದೊಡ್ಡದಿರುತ್ತದೆ. ಮಧ್ಯಾಹ್ನ ಸಣ್ಣದಾಗುತ್ತದೆ. ಸಾಯಂಕಾಲ ಮತ್ತೊಮ್ಮೆ ದೊಡ್ಡದಾಗುತ್ತದೆ. ಆದರೆ ಇಂದು ಮಂಗಳೂರಿನಲ್ಲಿ ಮಧ್ಯಾಹ್ನ 12.29ರ ಸುಮಾರಿಗೆ ನೆರಳು ನಮ್ಮ ಕಾಲಬುಡದಲ್ಲೇ ಇರುವ ವಿದ್ಯಮಾನ ನಡೆಯಿತು.
ಈ ವಿದ್ಯಮಾನವನ್ನು ಶೂನ್ಯ ನೆರಳಿನ ದಿನವೆಂದು ವಿವಿಧ ಪ್ರಾತ್ಯಕ್ಷಿಕೆಗಳ ಮುಖಾಂತರ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸ್ವಾಮಿ ವಿವೇಕಾನಂದ ತಾರಾಲಯದ ಆವರಣದಲ್ಲಿ ಆಸಕ್ತರಿಗೆ ನಿರೂಪಿಸಲಾಯಿತು. ಈ ಬಗ್ಗೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ.ವಿ.ರಾವ್ ಮಾತನಾಡಿ, ಸೂರ್ಯ ಕರ್ಕಾಟಕ ವೃತ್ತದೆಡೆಗೆ ಚಲಿಸುವುದರಿಂದ ಸೂರ್ಯ ನಡುನೆತ್ತಿಯ ಮೇಲೆ ಹಾದುಹೋಗುತ್ತಾನೆ. ಆದ್ದರಿಂದ ಈ ದಿನ ಮಂಗಳೂರಿನಲ್ಲಿ ಮಧ್ಯಾಹ್ನ 12.29ರ ಸುಮಾರಿಗೆ ಶೂನ್ಯ ನೆರಳು ನಮಗೆ ಅನುಭವವಾಗುತ್ತದೆ ಎಂದು ಹೇಳಿದರು.
ಅಲ್ಲದೆ ಇದನ್ನು ಬಳಸಿಕೊಂಡು ಮಂಗಳೂರಿನ ಅಕ್ಷಾಂಶ ಮತ್ತು ರೇಖಾಂಶಗಳಿಗೆ ಹೊಂದಿಕೊಳ್ಳುವ ದೇಶದ ಇತರ ತಾರಾಲಯಗಳಾದ ಬೆಂಗಳೂರು, ಚೆನ್ನೈ, ಜೈಪುರ ಹಾಗೂ ಶ್ರೀನಗರದ ತಾರಾಲಯಗಳ ಜೊತೆ ಹೊಂದಾಣಿಕೆ ಮಾಡಿಕೊಂಡು, ಭೂಮಿಯ ತಿರುಗುವ ವೇಗ, ಸುತ್ತಳತೆ, ಕಾಂತೀಯ ಉತ್ತರ ಹಾಗೂ ನಿಜವಾದ ಉತ್ತರದ ನಡುವಿನ ಉತ್ತರದ ಕೋನಗಳನ್ನು ಅಳೆಯಬಹುದು ಎಂದು ಹೇಳಿದರು.
ಮಂಗಳೂರಿನಲ್ಲಿ ಈ ವಿದ್ಯಮಾನವು ವರ್ಷಕ್ಕೆ ಎರಡು ಬಾರಿ ಸಂಭವಿಸುತ್ತದೆ. ಒಂದು ಬಾರಿ ಸೂರ್ಯನು ಉತ್ತರದ ಕಡೆಗೆ ಚಲಿಸುವಾಗ (ಏಪ್ರಿಲ್ 24), ಮತ್ತೊಮ್ಮೆ ಸೂರ್ಯ ದಕ್ಷಿಣದ ಕಡೆಗೆ ಚಲಿಸುವಾಗ(ಆಗಸ್ಟ್ 18) ಈ ಶೂನ್ಯ ನೆರಳಿನ ಅನುಭವವಾಗುತ್ತದೆ. ಈ ವಿದ್ಯಮಾನ ಸಂಭವಿಸುವ ದಿನಾಂಕವು ಆಯಾ ಸ್ಥಳಗಳ ಅಕ್ಷಾಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಭೂಮಿಯ ಅಕ್ಷವು 23.5 ಡಿಗ್ರಿ ವಾಲಿರುವುದರಿಂದ ಕರ್ಕಾಟಕ ಮತ್ತು ಮಕರ ಸಂಕ್ರಾಂತಿ ವೃತ್ತಗಳ ಒಳಭಾಗಗಳಲ್ಲಿ ಈ ವಿದ್ಯಮಾನವು ವಿವಿಧ ಸ್ಥಳಗಳಲ್ಲಿ ಬೇರೆ ಬೇರೆ ದಿನಗಳಲ್ಲಿ ಸಂಭವಿಸುತ್ತದೆ. ಉಡುಪಿಯಲ್ಲಿ ಈ ವಿದ್ಯಮಾನವು ನಾಳೆ, ಅಂದರೆ 25 ರಂದು ನಡೆಯುತ್ತದೆ ಎಂದು ಕೆ.ವಿ.ರಾವ್ ಹೇಳಿದರು.