ಲಂಡನ್: ವಿಶ್ವಕಪ್ನ ತನ್ನ ಎರಡನೇ ಪಂದ್ಯವಾಡುತ್ತಿರುವ ಭಾರತ ತಂಡ ಉತ್ತಮ ಆರಂಭ ಪಡೆದಿದ್ದು, ಆರಂಭಿಕ ರೋಹಿತ್ ಅರ್ಧಶತಕಗಳಿಸುವ ಮೂಲಕ ಅಸೀಸ್ ವಿರುದ್ಧ 2000 ರನ್ ಪೂರೈಸುವ ಮೂಲಕ ಒಂದೇ ತಂಡದ ವಿರುದ್ಧ ವೇಗವಾಗಿ ಈ ಸಾಧನೆ ಮಾಡಿದ ಬ್ಯಾಟ್ಸ್ಮನ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಕೆನ್ನಿಂಗ್ಟನ್ ಓವೆಲ್ನಲ್ಲಿ ನಡೆಯುತ್ತಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಉಪನಾಯಕ ರೋಹಿತ್ ಮೊದಲ ವಿಕೆಟ್‌ಗೆ ಧವನ್ ಜೊತೆಗೂಡಿ 127 ರನ್ ಸೇರಿಸಿ ನಾಥನ್ ಕೌಲ್ಟರ್ ನೈಲ್ಗೆ ವಿಕೆಟ್ ಒಪ್ಪಿಸಿದರು. ಇದಕ್ಕೂ ಮುನ್ನ 70 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 3 ಬೌಂಡರಿ ಸೇರಿದಂತೆ 57 ರನ್ ಕಲೆಹಾಕಿದರು.
ವೇಗದ 2000 ರನ್ ದಾಖಲೆ:
ಆಸೀಸ್ ವಿರುದ್ಧ ಅದ್ಭುತ ಪ್ರದರ್ಶನ ತೋರಿರುವ ರೋಹಿತ್ ಏಕದಿನ ಕ್ರಿಕೆಟ್ನಲ್ಲಿ ಒಂದೇ ತಂಡದ ವಿರುದ್ಧ ಅತೀ ಕಡಿಮೆ ಇನ್ನಿಂಗ್ಸ್ನಲ್ಲಿ 2000 ಸಾವಿರ ರನ್ ಪೂರೈಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರೋಹಿತ್ 37 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ರೋಹಿತ್ಗೂ ಮೊದಲು ಭಾರತದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾ ವಿರುದ್ಧವೇ 40 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದರು. ಇನ್ನು ವಿವಿ ರಿಚರ್ಡ್ಸ್ 44 ಇನ್ನಿಂಗ್ಸ್ಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ, ವಿರಾಟ್ ಕೊಹ್ಲಿ 44 ಇನ್ನಿಂಗ್ಸ್ನಲ್ಲಿ ಶ್ರೀಲಂಕಾ ವಿರುದ್ಧ, ಎಂಎಸ್ ಧೋನಿ 45 ಇನ್ನಿಂಗ್ಸ್ಗಳಲ್ಲಿ ಶ್ರೀಲಂಕಾ ವಿರುದ್ಧ ವೇಗವಾಗಿ 2000 ರನ್ಗಳಿಸಿದ ದಾಖಲೆ ಹೊಂದಿದ್ದಾರೆ.