ತುಮಕೂರು: ಮಾಜಿ ಪ್ರಧಾನಿ ಸ್ಪರ್ಧೆ ಮತ್ತು ಅವರಿಗೆ ಹಾಲಿ ಸಂಸದರಿಂದ ಎದುರಾಗಿದ್ದ ವಿರೋಧದಿಂದಾಗಿ ತುಮಕೂರು ಲೋಕಸಭಾ ಕ್ಷೇತ್ರ ದೇಶಾದ್ಯಂತ ಸುದ್ದಿಯಾಗಿತ್ತು. ಆದ್ರೆ ಈ ಕ್ಷೇತ್ರದ ಚುನಾವಣೆಯ ವಿಷಯವೇ ಮತ್ತೊಂದು ಸಂಚಲನ ಮೂಡಿಸುವಂತ ಆಡಿಯೋ ತುಣುಕೊಂದು ವೈರಲ್ ಆಗಿದೆ.
ಹೌದು, ಚುನಾವಣೆ ಮುಗಿದ ಬಳಿಕ ವೈರಲ್ ಆಗಿರುವ ಈ ಆಡಿಯೋದಲ್ಲಿ ಸಂಸದ ಮುದ್ದಹನುಮೇಗೌಡ ಮತ್ತು ಮಾಜಿ ಶಾಸಕ ಕೆ ಎನ್ ರಾಜಣ್ಣ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ನಾಮಪತ್ರ ವಾಪಸ್ ಪಡೆಯಲು ಉಭಯ ನಾಯಕರು ತಲಾ 3.5 ಕೋಟಿ ರೂ. ಪಡೆದಿದ್ದರು ಅನ್ನುವುದು ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ಕಾರ್ಯಕರ್ತ ದರ್ಶನ್ ಮತ್ತು ಇನ್ನೋರ್ವ ಕಾರ್ಯಕರ್ತನ ಮಧ್ಯೆ ನಡೆದಿದೆ ಎನ್ನಲಾದ ಸಂಭಾಷಣೆಯಲ್ಲಿದೆ.
ದರ್ಶನ್, ಮತ್ತೋರ್ವ ಕಾಂಗ್ರೆಸ್ ಕಾರ್ಯಕರ್ತನ ಜೊತೆ ಮಾತನಾಡಿದ್ದಾನೆ ಎಂದು ಆರೋಪಿಸಲಾಗಿದೆ. ದರ್ಶನ್ ಡಿಸಿಎಂ ಪರಮೇಶ್ವರ್ ಅವರಿಗೂ ಆಪ್ತ ಎನ್ನಲಾಗ್ತಿದೆ. ಅಲ್ಲದೆ ಈತ ತುಮಕೂರು ಕಾಂಗ್ರೆಸ್ ಸಾಮಾಜಿಕ ಜಾಲತಾಣ ಸಂಚಾಲಕನಾಗಿದ್ದಾನೆ. 13 ನಿಮಿಷಗಳ ಈ ಆಡಿಯೋದಲ್ಲಿ ಇಬ್ಬರೂ ಮುಖಂಡರು 3.5 ಕೋಟಿ ತೆಗೆದುಕೊಂಡ ಮೇಲೆ ನಾಮಪತ್ರ ವಾಪಸ್ ಪಡೆದರು. ಬಳಿಕ ಮೈತ್ರಿ ಅಭ್ಯರ್ಥಿ ಹೆಚ್ ಡಿ ದೇವೇಗೌಡರ ಪರ ಪ್ರಚಾರ ಮಾಡಬೇಕಿತ್ತು. ಆದ್ರೆ ಮಾಡಿಲ್ಲ ಅನ್ನೋ ವಿಷಯಗಳನ್ನು ದರ್ಶನ್ ಪ್ರಸ್ತಾಪಿಸಿದ್ದಾರೆ.
ಸಚಿವ ಶ್ರೀನಿವಾಸ್ ಸ್ಪಷ್ಟನೆ...
ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಣ್ಣ ಕೈಗಾರಿಕೆ ಸಚಿವ ಎಸ್ ಆರ್ ಶ್ರೀನಿವಾಸ್, ಲೋಕಸಭಾ ಚುನಾವಣೆಯಲ್ಲಿ ಸಂಸದ ಮುದ್ದಹನುಮೇಗೌಡರಿಗೆ ಪ್ರಚಾರಕ್ಕಾಗಿ ಹಣ ಕೊಡುವ ಯಾವುದೇ ರೀತಿಯ ಪ್ರಮೇಯ ಬಂದಿಲ್ಲ ಮತ್ತು ಕೊಟ್ಟಿಲ್ಲ. ಹಾಗೆಯೇ ಮಾಜಿ ಶಾಸಕ ಕಾಂಗ್ರೆಸ್ ಮುಖಂಡ ಕೆ ಎನ್ ರಾಜಣ್ಣ ಅವರಿಗೂ ಕೂಡ ಹಣ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಕಾರ್ಯಕರ್ತ ದರ್ಶನ್ ಎಂಬಾತ ಕಾಂಗ್ರೆಸ್ ಕಾರ್ಯಕರ್ತನೊಂದಿಗೆ ಸಂಭಾಷಣೆ ನಡೆಸಿದ್ದಾರೆ ಎಂಬುದು ಊಹಾಪೋಹದಿಂದ ಕೂಡಿದ್ದಾಗಿದೆ. ದರ್ಶನ್ ಜೊತೆ ಮಾತನಾಡಿರುವ ವ್ಯಕ್ತಿ ಯಾರು ಅನ್ನೋದೇ ಗೊತ್ತಿಲ್ಲ ಎಂದಿದ್ದಾರೆ.
ಇನ್ನು ಚುನಾವಣಾ ಪ್ರಚಾರದ ವೇಳೆ ನಡೆದಂತಹ ವೇದಿಕೆ ಕಾರ್ಯಕ್ರಮಗಳ ಖರ್ಚುವೆಚ್ಚಗಳನ್ನು ಪಕ್ಷದ ಲೆಕ್ಕಕ್ಕೆ ಸೇರಿಸಿಕೊಳ್ಳಲಾಗಿದೆ. ಅದನ್ನು ಹೊರತುಪಡಿಸಿ ಯಾರಿಗೂ ವೈಯಕ್ತಿಕವಾಗಿ ಹಣವನ್ನು ಕೊಟ್ಟಿಲ್ಲ. ದೇವೇಗೌಡರು ಸಹ ನಾವು ಕರೆದಾಗ ಬಂದು ಪ್ರಚಾರ ಮಾಡಿದ್ದರು. ಅವರು ಕೂಡ ಯಾರಿಗೂ ವೈಯಕ್ತಿಕವಾಗಿ ಹಣ ಕೊಟ್ಟಿಲ್ಲವೆಂದು ಸಚಿವರು ತಿಳಿಸಿದರು.
ಈ ಬಗ್ಗೆ ಮಾತನಾಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ದರ್ಶನ್ ಅಂತವರನ್ನು ಪಕ್ಷದೊಳಗೆ ಸೇರಿಸಿಕೊಂಡರೆ, ಸಮಾಜಕ್ಕೆ ಕೆಟ್ಟ ಸಂದೇಶ ರವಾನಿಸಿದಂತಾಗುತ್ತದೆ. ಹೀಗಾಗಿ ಉಪಮುಖ್ಯಮಂತ್ರಿ ಪರಮೇಶ್ವರ್ ಹೇಳಿರುವಂತೆ ಆತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಸಚಿವ ಶ್ರೀನಿವಾಸ್ ಆಗ್ರಹಿಸಿದರು.