ಬೆಂಗಳೂರು: ನಗರದಲ್ಲಿ ನಿತ್ಯ ಕೋವಿಡ್ ಸೋಂಕಿತರು ಹಾಸಿಗೆಗಾಗಿ ಪರದಾಡುತ್ತಿದ್ದಾರೆ. ಎಷ್ಟೇ ಗಂಭೀರ ಪರಿಸ್ಥಿತಿಯಲ್ಲಿದ್ದರೂ ಹಾಸಿಗೆ ಸೌಲಭ್ಯ ಸಿಗದೇ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿ ಹೈರಾಣಾಗುತ್ತಿದ್ದಾರೆ. ಈ ಸಂಕಷ್ಟಕ್ಕೆ ಕೊನೆಯಾಗುವ ದಿನಗಳು ಬಂದಿವೆ.
ಹೌದು, ಬಿಬಿಎಂಪಿ ಈ ಬಗ್ಗೆ ಮಹತ್ವದ ನಡೆ ಕೈಗೊಂಡಿದ್ದು, ಪ್ರತಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಟ್ರಯಾಜ್ ಸೆಂಟರ್‌ಗಳನ್ನು ನಿರ್ಮಿಸಿ, ದಿನದ 24 ಗಂಟೆಯೂ ಕೋವಿಡ್ ಸೋಂಕಿತರು ತೆರಳಬಹುದಾದ ಅವಕಾಶ ಕಲ್ಪಿಸಲು ಮುಂದಾಗಿದ್ದು, ದಿನದ 24 ಗಂಟೆಯೂ ಮೂರು ಪಾಳಿಯಲ್ಲಿ ಟ್ರಯಾಜ್ ಸೆಂಟರ್‌ಗಳು ಕಾರ್ಯನಿರ್ವಹಿಸಲಿವೆ.
ಕೋವಿಡ್ ಸೋಂಕಿತರು ಟ್ರಯಾಜ್ ಸೆಂಟರ್‌ಗೆ ತೆರಳಿದಲ್ಲಿ ರೋಗಿಯ ಸ್ಥಿಯಯನ್ನು ವೈದ್ಯರು ಪರಿಶೀಲಿಸುತ್ತಾರೆ. ಯಾವ ರೀತಿಯ ಮೆಡಿಕಲ್ ಸೌಲಭ್ಯ ಅಗತ್ಯ ಇದೆ ಎಂದು ನಿರ್ಧರಿಸಿ ನಂತರ ಕೋವಿಡ್ ಆರೈಕೆ ಕೇಂದ್ರ ಅಥವಾ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಇಲ್ಲೇ ಪ್ರತ್ಯೇಕ ಹೆಲ್ಪ್ ಲೈನ್ ಕೂಡಾ ಇರಲಿದ್ದು, ಬೆಡ್ ಕಾಯ್ದಿರಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಕೆಲವೆಡೆ ಪ್ರತ್ಯೇಕವಾಗಿ ಟ್ರಯಾಜ್ ಸೆಂಟರ್ ಗಳಿರಲಿದ್ದು, ಇನ್ನು ಕೆಲವೆಡೆ ಕೋವಿಡ್ ಸೋಂಕಿತರ ಆರೈಕೆಗಾಗಿ ಸ್ಥಾಪಿಸಿರುವ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಟ್ರಯಾಜ್ ಸೆಂಟರ್ ತೆರೆಯಲಾಗಿದೆ. ಕೋವಿಡ್ ಆರೈಕೆ ಕೇಂದ್ರಗಳಿಗೆ ವಾಕ್ ಇನ್ ಮೂಲಕ ಹೋಗುವ ಕೋವಿಡ್ ಸೋಂಕಿತರಿಗೆ ವೈದ್ಯರು ಟ್ರಯಾಜ್ ನಡೆಸಿ ಆರೋಗ್ಯ ಮೇಲ್ವಿಚಾರಣೆ ಮಾಡಿ ಕೋವಿಡ್ ಆರೈಕೆ ಕೇಂದ್ರಕ್ಕೆ ನೇರವಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತದೆ. ಟ್ರಯಾಜ್ ಸೆಂಟರ್‌ಗಳನ್ನು ಸ್ಥಳೀಯ ರೆಫೆರಲ್ ಆಸ್ಪತ್ರೆ, ವೈದ್ಯಕೀಯ ಆಸ್ಪತ್ರೆ,ಖಾಸಗಿ ಆಸ್ಪತ್ರೆಗಳ ಜೊತೆ ಲಿಂಕ್ ಮಾಡಲಾಗಿರುತ್ತದೆ.
ಟ್ರಯಾಜ್ ಸೆಂಟರ್ ಹೇಗಿರಲಿದೆ?
ಪಾಲಿಕೆ ಆದೇಶದಲ್ಲಿರುವಂತೆ ಟ್ರಯಾಜ್ ಸೆಂಟರ್ - ಹಾಗೂ ಸಿಸಿಸಿ ಕೇಂದ್ರಗಳಲ್ಲಿ ಆಂಬ್ಯುಲೆನ್ಸ್ ಸೌಲಭ್ಯ ಇರಲಿದೆ. ಮೂರು ಪಾಳಿಯಲ್ಲೂ ವೈದ್ಯರು 24/7 ಕೆಲಸ ನಿರ್ವಹಿಸಲಿದ್ದಾರೆ. ಈ ಸೆಂಟರ್ ನಲ್ಲಿ ಎಲ್ಲಾ ಆರೋಗ್ಯ ಉಪಕರಣಗಳೂ ಇರಲಿದೆ. ಇಲ್ಲಿಗೆ ಬರುವ ಯಾವ ರೋಗಿಯನ್ನೂ ನಿರಾಕರಿಸುವಂತಿಲ್ಲ. ಟ್ರಯಾಜ್ ಸೆಂಟರ್ ವೈದ್ಯರು ಅಗತ್ಯ ಬಿದ್ದಲ್ಲಿ ಸಲಹೆಗಾಗಿ ತಜ್ಞ ವೈದ್ಯರ ಸಂಪರ್ಕದಲ್ಲಿರಬೇಕು.
ಒಟ್ಟಿನಲ್ಲಿ ನಗರದ ಸೋಂಕಿತರ ಜೀವ ಉಳಿಸಲು, ಕುಟುಂಬಸ್ಥರ ಆತಂಕ ಕಡಿಮೆ ಮಾಡಲು ಟ್ರಯಾಜ್ ಸೆಂಟರ್ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ ಎಂದು ಅಂದಾಜಿಸಲಾಗಿದೆ. ಅನಗತ್ಯವಾಗಿ ಐಸಿಯು ಹಾಸಿಗೆಗಳನ್ನು ಪಡೆಯುವುದು, ಪ್ರಭಾವ ಬಳಸಿ, ಅಗತ್ಯವಿಲ್ಲದಿದ್ದರೂ ಆಸ್ಪತ್ರೆ ಬೆಡ್ ಪಡೆಯುವುದನ್ನೂ ಇದರಿಂದ ತಡೆಯಬಹುದಾಗಿದೆ.