ಕೊಪ್ಪಳ: ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹಬ್ಬುತ್ತಿರುವುದು ಜನರಲ್ಲಿ ಭೀತಿ ಮೂಡಿಸಿದೆ. ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ 14 ದಿನಗಳ ಕಾಲ ಕೊರೊನಾ ಕರ್ಫ್ಯೂ ಜಾರಿ ಮಾಡಿರೋದು ಹಲವು ವರ್ಗದ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ರೈಲು, ರಸ್ತೆಗಳಲ್ಲಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ ತೃತೀಯ ಲಿಂಗಿಗಳ ಬದುಕು ಸಂಕಷ್ಟಕ್ಕೆ ಸಿಲುಕಿದೆ. 14 ದಿನಗಳ ಕರ್ಫ್ಯೂ ಜಾರಿಯಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಸಾರಿಗೆ ಸಂಸ್ಥೆಗಳ ಬಸ್ಗಳು ಸ್ತಬ್ಧಗೊಂಡಿವೆ. ಇನ್ನು ಕೆಲ ರೈಲುಗಳು ಸಹ ಓಡಾಟ ನಿಲ್ಲಿಸಿವೆ. ರೈಲಿನಲ್ಲಿ ಭಿಕ್ಷೆ ಬೇಡಿ ಬದುಕು ನಡೆಸುತ್ತಿದ್ದ ಮಂಗಳಮುಖಿಯರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೊಪ್ಪಳ ನಗರದಲ್ಲಿ ಸುಮಾರು 20 ಮಂದಿ ಮಂಗಳಮುಖಿಯರು ಇದ್ದಾರೆ. ಇವರೆಲ್ಲಾ ರೈಲು, ಹೈವೇ, ಜನದಟ್ಟಣೆ ಇರುವ ರಸ್ತೆಗಳಲ್ಲಿ ನಿಂತು ಭಿಕ್ಷೆ ಬೇಡಿ ಬದುಕು ನಡೆಸುತ್ತಿದ್ದರು. ಈಗ ಕೊರೊನಾ ಕರ್ಫ್ಯೂ ಜಾರಿಯಾದ ಹಿನ್ನೆಲೆಯಲ್ಲಿ ಇವರು ಸಹ ಹೊರಗೆ ಹೋಗುವಂತಿಲ್ಲ. ರಸ್ತೆಯಲ್ಲಿ ಭಿಕ್ಷೆ ಕೇಳುವಂತಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ವಿರಳವಾಗಿ ಸಂಚರಿಸುತ್ತಿರುವ ರೈಲಿನಲ್ಲಿಯೂ ಸಹ ಇವರು ಹೋಗುತ್ತಿಲ್ಲ. ಇದರಿಂದಾಗಿ ಇವರ ಬದುಕು ಈಗ ಕಷ್ಟಕ್ಕೆ ಸಿಲುಕಿದೆ. ಮನೆಯವರಿಂದ ತಿರಸ್ಕಾರಕ್ಕೊಳಗಾಗಿ ತಮ್ಮಂತೆಯೇ ಇರುವವರೊಡಗೂಡಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಈಗ ಇವರಿಗೆ ಯಾವುದೇ ಆದಾಯವಿಲ್ಲದೆ ಇರುವುದರಿಂದ ಬದುಕು ಬಹಳ ದುಸ್ತರವಾಗುತ್ತಿದೆ.
ಕೊರೊನಾ ಕರ್ಫ್ಯೂನಿಂದ ರಸ್ತೆಯಲ್ಲಿ ನಿಂತು ಭಿಕ್ಷೆ ಬೇಡದಂತೆ ನಮಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ನಿತ್ಯವೂ ಇನ್ನೂರರಿಂದ ಮುನ್ನೂರು ರೂಪಾಯಿ ಭಿಕ್ಷೆ ಬೇಡಿ ಸಂಪಾದಿಸಿ ಬದುಕು ನಡೆಸುತ್ತಿದ್ದೆವು. ಈಗ ಕೊರೊನಾ ಕರ್ಫ್ಯೂನಿಂದ ನಮಗೆ ತೊಂದರೆಯಾಗಿದೆ. ಯಾರೂ ಸಹ ನಮಗೆ ಕೆಲಸವನ್ನೂ ನೀಡುವುದಿಲ್ಲ. ಊಟಕ್ಕೂ ಸಹ ನಾವು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬಾಡಿಗೆ ಮನೆಯಲ್ಲಿದ್ದು ಬಾಡಿಗೆ ಕೊಡುವುದಕ್ಕೂ ಆಗುವದಿಲ್ಲ. ನಮ್ಮ ಗೋಳು ಹೇಳತೀರದಂತಾಗಿದೆ ಎಂದು ಮಂಗಳಮುಖಿಯರು ಅಳಲು ತೋಡಿಕೊಂಡಿದ್ದಾರೆ.