ಶಿವಮೊಗ್ಗ : ಶಿವಮೊಗ್ಗದ ಬಾಲಮಂದಿರದಲ್ಲಿ 7 ಜನ ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ. ಅದೇ ರೀತಿ ಇಬ್ಬರು ಸಿಬ್ಬಂದಿಯಲ್ಲೂ ಸಹ ಸೋಂಕು ಕಾಣಿಸಿದೆ.
ಶಿವಮೊಗ್ಗದ ಆಲ್ಕೊಳದಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆವರಣದಲ್ಲಿನ ಬಾಲಮಂದಿರದಲ್ಲಿ ಕಳೆದ ನಾಲ್ಜೈದು ದಿನದ ಹಿಂದೆ ಇಲ್ಲಿನ ಓರ್ವ ಸಿಬ್ಬಂದಿಯಲ್ಲಿ ಕೊರೊನಾ ಲಕ್ಷಣಗಳು ಕಂಡು ಬಂದಿದೆ.
ಇವರಿಗೆ ಪರೀಕ್ಷೆ ನಡೆಸಿದಾಗ ಕೊರೊನಾ ಪಾಸಿಟಿವ್ ಬಂದಿದೆ. ಈ ಸಿಬ್ಬಂದಿ ಮಕ್ಕಳೂಂದಿಗೆ ನೇರ ಸಂಪರ್ಕ ಹೊಂದಿದ್ದರು. ನಂತರ ಇಬ್ಬರು ಮಕ್ಕಳಲ್ಲಿ ಕೊರೊನಾ ಶೀತ- ಜ್ವರ ಕಾಣಿಸಿದೆ.
ಈ ಮಕ್ಕಳನ್ನು ಪರೀಕ್ಷೆಗೊಳಪಡಿಸಿದಾಗ, ಅವರಿಗೂ ಸಹ ಪಾಸಿಟಿವ್ ಬಂದಿದೆ. ನಂತರ ಬಾಲ ಮಂದಿರದಲ್ಲಿದ್ದ ಎಲ್ಲಾ ಮಕ್ಕಳಿಗೂ ಸಹ ಪರೀಕ್ಷೆಗೊಳಪಡಿಸಿದಾಗ ಎಲ್ಲಾ ಮಕ್ಕಳಿಗೂ ಸಹ ಪಾಸಿಟಿವ್ ವರದಿ ಬಂದಿದೆ.
ಬಾಲ ಮಂದಿರದಲ್ಲಿ ಒಟ್ಟು 40 ಮಕ್ಕಳಿದ್ದು, ಇದರಲ್ಲಿ 23 ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆದೇಶದ ಪ್ರಕಾರ ಪೋಷಕರ ಜೊತೆ ಮನೆಗೆ ಕಳುಹಿಸಲಾಗಿದೆ. ಉಳಿದ 17 ಮಕ್ಕಳ ಮನೆ ಕಡೆ ಸರಿಯಾಗಿ ಪೋಷಣೆ ಮಾಡದೆ ಇರುವುದರಿಂದ ಅವರನ್ನು ಬಾಲ ಮಂದಿರದಲ್ಲಿಯೇ ಇಟ್ಟುಕೊಳ್ಳಲಾಗಿತ್ತು.
ಇದರಲ್ಲಿ 7 ಮಕ್ಕಳಿಗೆ ಹಾಗೂ ಇಬ್ಬರು ಸಿಬ್ಬಂದಿಗೆ ಕೊರೊನಾ ಬಂದಿದ್ದು, ಮಕ್ಕಳನ್ನು ಓರ್ವ ಸಿಬ್ಬಂದಿಯ ಜೊತೆ ಗಾಜನೂರು ಕೋವಿಡ್ ಕೇರ್ ಸೆಂಟರ್‌ಗೆ ಕಳುಹಿಸಲಾಗಿದೆ.