ನವದೆಹಲಿ: ಬಿಸಿಲಿನ ತಾಪಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ಪ್ರತಿದಿನ ತತ್ತರಿಸುತ್ತಿದ್ದು, ದಿನದಿಂದ ದಿನಕ್ಕೆ ಉಷ್ಣಾಂಶ ಹೆಚ್ಚಾಗುತ್ತಿದೆ. ಇದೀಗ ದೆಹಲಿ ಇತಿಹಾಸದಲ್ಲೇ ಮೊದಲ ಸಲ ತಾಪಮಾನ ಶೇ. 48ಕ್ಕೆ ತಲುಪಿ ದಾಖಲೆ ಬರೆದಿದೆ.
ದೆಹಲಿಯಲ್ಲಿ ನಿನ್ನೆ 47.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇನ್ನು ಕಳೆದ ಐದು ವರ್ಷಗಳಲ್ಲೇ ಗರಿಷ್ಠ ತಾಪಮಾನ ಇದಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮುಂದಿನ ಎರಡು ದಿನಗಳಲ್ಲಿ ಇದೇ ರೀತಿಯ ಉಷ್ಣಾಂಶ ಇರಲಿದೆ ಎಂದು ತಿಳಿಸಿದೆ. ದೆಹಲಿ ಹೊರತುಪಡಿಸಿ ಉತ್ತರ ಭಾರತದ ರಾಜಸ್ಥಾನ, ಮಧ್ಯಪ್ರದೇಶ, ಹರಿಯಾಣಗಳಲ್ಲೂ 45 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ.
ದೆಹಲಿಯ ಇತರೆ ಭಾಗಗಳಿಗಿಂತಲೂ ಇಲ್ಲಿನ ಪಾಲಮ್ನಲ್ಲಿ ಸಾಮಾನ್ಯವಾಗಿ ಹೆಚ್ಚಿನ ತಾಪಮಾನವಿರುತ್ತದೆ. ಅಲ್ಲದೆ ಇದು ವಿಮಾನ ನಿಲ್ದಾಣವಿರುವ ಪ್ರದೇಶವಾಗಿದ್ದು, ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಮಾನಗಳ ಸಂಚಾರವಿರುತ್ತದೆ. ಹೀಗಾಗಿ ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಮಾನದ ಹೊಗೆ ವಾತಾವರಣ ಸೇರಿ ತಾಪಮಾನ ಹೆಚ್ಚಾಗಲು ಕಾರಣವಾಗುತ್ತದೆ ಎಂದು ತಿಳಿದು ಬಂದಿದೆ.