ಬೆಂಗಳೂರು : ಕೊರೊನಾ ಲಸಿಕೆ ಖರೀದಿಗಾಗಿ ರಾಜ್ಯ ಸರ್ಕಾರವೂ ಜಾಗತಿಕ ಟೆಂಡರ್‌ನ ಮೊರೆ ಹೋಗಿತ್ತು. ಆದರೆ, ಮೊದಲ ಯತ್ನದಲ್ಲೇ ಸರ್ಕಾರ ವಿಫಲವಾಗಿದೆ.
ಟೆಂಡರ್ ಪ್ರಕ್ರಿಯೆಯಲ್ಲಿ ಪರಿಣಿತ, ಅನುಭವಿ, ಯೋಗ್ಯ ಸಂಸ್ಥೆಗಳು ಭಾಗವಹಿಸದೇ ಇರುವುದರಿಂದ ಲಸಿಕೆ ಖರೀದಿಸುವಾಗಿನ ಗ್ಲೋಬಲ್ ಟೆಂಡರ್ ನಿರೀಕ್ಷಿತ ಯಶಸ್ಸು ಕಾಣುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಕೊರೊನಾ ಎರಡನೇ ಅಲೆ ಎಲ್ಲೆ ಮೀರಿ, ಇದೀಗ ಕೊಂಚ ನಿಯಂತ್ರಣದ ಕಡೆಗೆ ಬರುತ್ತಿದೆ. ಆದರೆ, ಕೊರೊನಾ ಎರಡನೇ ಅಲೆ ಸೃಷ್ಟಿಸಿದ ಜೀವಭಯ ಅಷ್ಟಿಷ್ಟಲ್ಲ. ಇತ್ತ ಕೊರೊನಾ ವಿರುದ್ಧದ ಸಂಜೀವಿನಿಯಾದ ಲಸಿಕಾ ಅಭಿಯಾನವನ್ನು ಸರ್ಕಾರ ವೇಗವಾಗಿ ಕೈಗೊಳ್ಳುತ್ತಿದೆ.
ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ತಾವೇ ನೇರವಾಗಿ ಉತ್ಪಾದಕ ಸಂಸ್ಥೆಗಳಿಂದ ಲಸಿಕೆ ಖರೀದಿ ಮಾಡುವ ಅಧಿಕಾರವನ್ನು ನೀಡಿದೆ. ಅದರಂತೆ ರಾಜ್ಯ ಸರ್ಕಾರಗಳೇ ನೇರವಾಗಿ ಉತ್ಪಾದಕರಿಂದ ಲಸಿಕೆಯನ್ನು ಖರೀದಿ ಮಾಡಬಹುದಾಗಿದೆ.
ಆ ಸಂಬಂಧ ಕರ್ನಾಟಕವೂ ಇತರ ರಾಜ್ಯಗಳಂತೆ ಲಸಿಕೆ ಖರೀದಿಗಾಗಿ ಗ್ಲೋಬಲ್ ಟೆಂಡರ್ ಮೊರೆ ಹೋಗಿದೆ. ಆದರೆ, ಮೊದಲ ಯತ್ನದಲ್ಲೇ ರಾಜ್ಯದ ಗ್ಲೋಬಲ್ ಟೆಂಡರ್ ಪ್ರಕ್ರಿಯೆ ವಿಫಲವಾಗಿದೆ.
ನಿರೀಕ್ಷಿತ ಫಲ ನೀಡದ ಗ್ಲೋಬಲ್ ಟೆಂಡರ್ : ರಾಜ್ಯ ಸರ್ಕಾರ ರಾಜ್ಯದ ಲಸಿಕೆ ಅಗತ್ಯವನ್ನು ಪೂರೈಸುವ ನಿಟ್ಟಿನಲ್ಲಿ ಗ್ಲೋಬಲ್ ಟೆಂಡರ್‌ನ ಕರೆದಿತ್ತು. ಅದರಂತೆ ನಾಲ್ಕು ಕಂತಿನಲ್ಲಿ 50 ಲಕ್ಷದಂತೆ ಒಟ್ಟು ಎರಡು ಕೋಟಿ ಲಸಿಕೆಯನ್ನು ಖರೀದಿಸಲು ಮುಂದಾಗಿದೆ. ಈ ಉದ್ದೇಶಕ್ಕಾಗಿ ರಾಜ್ಯ ಸರ್ಕಾರ 843 ಕೋಟಿ ರೂ.ಗೆ ಅನುಮೋದನೆ ನೀಡಿದೆ.
ಮೇ 14 ರಿಂದ 24ರವರೆಗೆ ತೆರೆಯಲಾಗಿದ್ದ ರಾಜ್ಯದ ಗ್ಲೋಬಲ್ ಟೆಂಡರ್ ಪ್ರಕ್ರಿಯೆಯಲ್ಲಿ ಎರಡು ಸಂಸ್ಥೆಗಳು ಭಾಗವಹಿಸಿ ಅರ್ಜಿ ಹಾಕಿದ್ದವು. ಮುಂಬೈ ಮೂಲದ ಬಲ್ಕ್ ಎಂಆರ್ಒ ಇಂಡಸ್ಟ್ರಿಯಲ್ ಸಪ್ಲೈ ಲಿ. ಸ್ಪುಟ್ನಿಕ್-ವಿ ಲಸಿಕೆ ಪೂರೈಸಲು ಮತ್ತು ಬೆಂಗಳೂರು ಮೂಲದ ತುಳಸಿ ಸಿಸ್ಟಂ ಸಂಸ್ಥೆ ಸ್ಪುಟ್ನಿಕ್ ಲೈಟ್ ಲಸಿಕೆಯನ್ನು ಪೂರೈಸುವುದಾಗಿ ಟೆಂಡರ್ ಅರ್ಜಿ ಹಾಕಿದ್ದರು.
ಆದರೆ, ಈ ಎರಡೂ ಸಂಸ್ಥೆಗಳಿಗೆ ಲಸಿಕೆ ಪೂರೈಕೆ ನಿಟ್ಟಿನಲ್ಲಿ ಹೆಚ್ಚಿನ ಅನುಭವ, ಪರಿಣತಿ ಹಾಗೂ ಟ್ರಾಕ್ ರೆಕಾರ್ಡ್ ಇಲ್ಲ. ಜೊತೆಗೆ ಲಸಿಕಾ ದರವನ್ನು ದುಬಾರಿ 25 ಡಾಲರ್ಗೆ ನಿಗದಿ ಮಾಡಿತ್ತು. ಈ ಎರಡೂ ಸಂಸ್ಥೆಗಳು ಲಸಿಕೆ ಉತ್ಪಾದಕರಲ್ಲ. ಬರೇ ಪೂರೈಕೆದಾರರಾಗಿದ್ದಾರೆ.
ಹೇಗೆ ಲಸಿಕೆ ಪೂರೈಸುತ್ತಾರೆ, ಯಾವಾಗ ಪೂರೈಕೆ ಮಾಡುತ್ತಾರೆ ಎಂಬ ಬಗ್ಗೆ ಸ್ಪಷ್ಟವಾದ ಚಿತ್ರಣ ಅವರಲ್ಲೂ ಇಲ್ಲ. ಹೀಗಾಗಿ, ಸರ್ಕಾರ ಎರಡು ಸಂಸ್ಥೆಗಳ ಟೆಂಡರ್ ಅರ್ಜಿಯನ್ನು ತಿರಸ್ಕರಿಸಿದೆ ಎಂದು ಕೋವಿಡ್-19 ಟಾಸ್ಕ್ ಫೋರ್ಸ್ ಅಧ್ಯಕ್ಷರಾದ ಡಿಸಿಎಂ ಅಶ್ವತ್ಥ್ ನಾರಾಯಣ್ ವಿವರಿಸಿದ್ದಾರೆ.
ಹೀಗಾಗಿ, ಮೊದಲ ಯತ್ನದಲ್ಲಿ ಗ್ಲೋಬಲ್ ಟೆಂಡರ್ ವಿಫಲವಾಗಿದೆ. ಇದೀಗ ಮತ್ತೆ ಗ್ಲೋಬಲ್ ಟೆಂಡರ್ ಕಾಲಾವಧಿಯನ್ನು ವಿಸ್ತರಿಸಲು ಸರ್ಕಾರ ಅಧಿಕಾರಿಗಳಿಗೆ ಸೂಚಿಸಿದೆ. ನುರಿತ, ಅನುಭವಿ, ಯೋಗ್ಯ ಸಂಸ್ಥೆಗಳು ಲಸಿಕೆ ಪೂರೈಕೆಗಾಗಿ ಕಾರ್ಯಸಾಧ್ಯವಾಗುವಂತಹ ಟೆಂಡರ್ ಅರ್ಜಿ ಸಲ್ಲಿಸಬಹುದು ಎಂಬ ನಿರೀಕ್ಷೆಯಲ್ಲಿ ಸರ್ಕಾರ ಇದೆ.
ಕೇಂದ್ರ ಸರ್ಕಾರದತ್ತ ರಾಜ್ಯ ಸರ್ಕಾರ ಮುಖ : ಗ್ಲೋಬಲ್ ಟೆಂಡರ್ ಅವಧಿ ವಿಸ್ತರಿಸಿದರೂ ಯೋಗ್ಯ ಸಂಸ್ಥೆಗಳು ಅರ್ಜಿ ಹಾಕುವುದು ಅನುಮಾನವಾಗಿದೆ. ಈ ಸಂಬಂಧ ಅಧಿಕಾರಿಗಳೇ ಅನುಮಾನ ವ್ಯಕ್ತಪಡಿಸಿದ್ದಾರೆ.
ಲಸಿಕಾ ಉತ್ಪಾದಕ ಸಂಸ್ಥೆಗಳಾದ ಅಮೆರಿಕಾದ ಫೈಝರ್ ಹಾಗೂ ಮೊಡಾರ್ನಾ ಸಂಸ್ಥೆ ತಾವೇನಿದ್ದರೂ ಭಾರತ ಸರ್ಕಾರದ ಜೊತೆಗೇ ವ್ಯವಹಾರ ನಡೆಸುವುದಾಗಿ ಸ್ಪಷ್ಟಪಡಿಸಿವೆ.
ಇನ್ನು, ರಷ್ಯಾದ ಸ್ಪುಟ್ನಿಕ್-ವಿ ಲಸಿಕೆ ಪೂರೈಕೆಗಾಗಿ ಆ ಉತ್ಪಾದಕಾ ಸಂಸ್ಥೆ ಭಾರತದ ಡಾ.ರೆಡ್ಡೀಸ್ ಸಂಸ್ಥೆಯೊಂದಿಗೆ ಮಾತ್ರ ಒಡಂಬಡಿಕೆ ಮಾಡಿಕೊಂಡಿದೆ. ಭಾರತದ ಬೇರೆ ಯಾವುದೇ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿಲ್ಲ ಎಂದು ಡಾ.ರೆಡ್ಡೀಸ್ ಸಂಸ್ಥೆ ಸ್ಪಷ್ಟಪಡಿಸಿದೆ.
ಹೀಗಾಗಿ, ಈಗಿರುವ ಪರಿಸ್ಥಿತಿಯಲ್ಲಿ ಗ್ಲೋಬಲ್ ಟೆಂಡರ್ಗೆ ನಿರೀಕ್ಷಿತ ಸ್ಪಂದನೆ ಸಿಗುವುದು ಕಷ್ಟ ಸಾಧ್ಯ ಎಂದು ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಕಾಲಾವಕಾಶ ವಿಸ್ತರಿಸಿದರೂ ಯೋಗ್ಯ ಬಿಡ್ಡುದಾರರು ಭಾಗವಹಿಸುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಗ್ಲೋಬಲ್ ಟೆಂಡರ್ ಮೂಲಕ ಲಸಿಕೆ ಖರೀದಿಯಲ್ಲಿ ಸಾಕಷ್ಟು ಸಂಕೀರ್ಣತೆ, ದರ ಗೊಂದಲಗಳಿವೆ. ಹೀಗಾಗಿ, ಲಸಿಕೆ ಖರೀದಿಸಿ ಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವೇ ಮಧ್ಯ ಪ್ರವೇಶಿಸಬೇಕು ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ದೆಹಲಿ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲೂ ಇದೇ ಪರಿಸ್ಥಿತಿ ಎದುರಾಗಿದ್ದು, ಕರ್ನಾಟಕ ಸರ್ಕಾರವೂ ಈಗ ಲಸಿಕೆ ಖರೀದಿ ಮಾಡುವ ನಿಟ್ಟಿನಲ್ಲಿ ಕೇಂದ್ರದತ್ತ ಮುಖ ಮಾಡಿದೆ.