ಬೆಂಗಳೂರು: ರಾಜ್ಯದಲ್ಲಿ ವ್ಯಾಕ್ಸಿನ್ ಕೊರತೆ ತಲೆದೋರಿದ್ದು, ಇದು ರಾಜ್ಯ ಸರ್ಕಾರದ ವೈಫಲ್ಯ ಎತ್ತಿ ತೋರಿಸುತ್ತಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಅನ್ನೋದಕ್ಕೆ ರಾಜ್ಯದಲ್ಲಿ ತಲೆದೋರಿರುವ ವ್ಯಾಕ್ಸಿನ್ ಕೊರತೆ ಮತ್ತೊಂದು ಸಾಕ್ಷಿ. ದಿನವೊಂದಕ್ಕೆ 30 ಸಾವಿರಕ್ಕೂ ಹೆಚ್ಚು ಕೋವಿಡ್ ಪಾಸಿಟಿವ್ ಕೇಸ್ಗಳು ಪತ್ತೆಯಾಗುತ್ತಿರೋ ರಾಜ್ಯದಲ್ಲಿ ಸದ್ಯಕ್ಕೆ ದಾಸ್ತಾನಿರುವುದು ಕೇವಲ 8.5 ಲಕ್ಷ ಡೋಸ್. ಭಾನುವಾರ ಸಂಜೆಯ ವೇಳೆಗೆ ಬೆಂಗಳೂರಿನಲ್ಲಿ ಉಳಿದಿರುವುದು ಕೇವಲ 52 ಸಾವಿರ ವ್ಯಾಕ್ಸಿನ್ ಡೋಸ್.
ಬೆಂಗಳೂರಿನಲ್ಲಿ ದಿನಕ್ಕೆ 20 ಸಾವಿರಕ್ಕೂ ಹೆಚ್ಚು ಕೇಸ್ ಪತ್ತೆಯಾಗುತ್ತಿದೆ. ಈಗಿರುವ ವ್ಯಾಕ್ಸಿನ್ ದಾಸ್ತಾನು 2 ದಿನಗಳಲ್ಲಿ ಖಾಲಿಯಾಗಲಿದೆ. ವ್ಯಾಕ್ಸಿನ್ ಕೊರತೆ ನಗರದಲ್ಲಿ ಲಸಿಕಾ ಕಾರ್ಯಕ್ರಮಕ್ಕೆ ಭಾರಿ ಹಿನ್ನಡೆಯಾಗಿದೆ ಎಂದಿದ್ದಾರೆ.
ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ಹಾಕಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಆದರೆ, ರಾಜ್ಯದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಹಾಕಲು ವ್ಯಾಕ್ಸಿನ್ ಲಭ್ಯವಿಲ್ಲದಂತಾಗಿದೆ. ಕೂಡಲೇ ಯಡಿಯೂರಪ್ಪ ಅವರು ವ್ಯಾಕ್ಸಿನ್ಗಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಆಗ್ರಹಿಸುತ್ತೇನೆ ಎಂದರು.
ಸದ್ಯಕ್ಕೆ ರಾಜ್ಯದಲ್ಲಿ ದಿನಕ್ಕೆ ಸರಾಸರಿ 70 ರಿಂದ 80 ಸಾವಿರ ಜನರಿಗೆ ಕೊರೊನಾ ಲಸಿಕೆ ಹಾಕಲಾಗುತ್ತಿದೆ. 100 ಜನಕ್ಕೆ ಟೆಸ್ಟ್ ಮಾಡಿದರೆ 19 ಜನರಲ್ಲಿ ಸೋಂಕು ಪತ್ತೆಯಾಗುತ್ತಿದೆ. ಇಂಥಾ ಪರಿಸ್ಥಿತಿಯಲ್ಲಿ ಹೆಚ್ಚೆಚ್ಚು ಜನರಿಗೆ ವ್ಯಾಕ್ಸಿನ್ ಹಾಕಬೇಕು. ದುರಂತ ಅಂದರೆ ರಾಜ್ಯದಲ್ಲಿ ವ್ಯಾಕ್ಸಿನ್ ದಾಸ್ತಾನು ತೀರಾ ಕನಿಷ್ಠ ಮಟ್ಟದಲ್ಲಿದೆ ಎಂದು ಹೇಳಿದ್ದಾರೆ. ವ್ಯಾಕ್ಸಿನ್ ಹಾಕಿಸಿಕೊಳ್ಳಲು 45 ವರ್ಷ ಮೇಲ್ಪಟ್ಟವರು ಆಸ್ಪತ್ರೆಗಳಿಗೆ ಹೋದರೆ ಸ್ಟಾಕ್ ಇಲ್ಲ ಎಂದು ವಾಪಸ್ ಕಳುಹಿಸಲಾಗುತ್ತಿದೆ.
ವ್ಯಾಕ್ಸಿನೇಶನ್ಗೆ ಸಮಯ ನಿಗದಿ ಮಾಡಿ ಮೊಬೈಲ್ಗೆ ಸಂದೇಶ ಬಂದ ನಂತರ ಆಸ್ಪತ್ರೆಗೆ ಹೋದವರಿಗೆ ಸ್ಟಾಕ್ ಬಂದಿಲ್ಲ ಎಂದು ಹೇಳಲಾಗುತ್ತಿದೆ. ಚಿಕಿತ್ಸೆಯಲ್ಲಿಯೂ ಅವ್ಯವಸ್ಥೆ, ವ್ಯಾಕ್ಸಿನ್ ವಿಷಯದಲ್ಲಿ ಅವ್ಯವಸ್ಥೆ ಎದುರಾಗಿದೆ ಎಂದಿದ್ದಾರೆ.