ಲಂಡನ್: ಆಸ್ಟ್ರೇಲಿಯಾ ತಂಡವನ್ನು ಮಣಿಸಿದ ಖುಷಿಯಲ್ಲಿದ್ದ ಭಾರತಕ್ಕೆ ಗಾಯಾಳು ಶಿಖರ್ ಧವನ್ ಚಿಂತೆ ಕಾಡಿತ್ತು. ಶಿಖರ್ ಜಾಗಕ್ಕೆ ವಿಜಯ್ ಶಂಕರ್ ಆಯ್ಕೆ ಮಾಡಲಾಗುತ್ತದೆ ಎಂದು ಹೇಳುವ ಮೂಲಕ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.
ಕಳೆದೆರಡು ದಿನಗಳಿಂದ ಆರಂಭಿಕ ಆಟಗಾರ ಶಿಖರ್ ಧವನ್ ಸ್ಥಾನ ತುಂಬಲು ಟೀಮ್ ಇಂಡಿಯಾದಲ್ಲಿ ಯಾರು ಸೇರ್ಪಡೆಗೊಳ್ಳಲಿದ್ದಾರೆ? ಎಂಬ ವಿಚಾರ ಭಾರಿ ಚರ್ಚೆಯಲ್ಲಿತ್ತು. ಆದರೆ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಸಂಜಯ್ ಬಂಗಾರ್, ಧವನ್ ಸ್ಥಾನದಲ್ಲಿ ರಾಹುಲ್ ಇನ್ನಿಂಗ್ಸ್ ಆರಂಭಿಸಲಿದ್ದು, 4ನೇ ಕ್ರಮಾಂಕಕ್ಕೆ ಆಲ್‌ರೌಂಡರ್ ವಿಜಯ್ ಶಂಕರ್ ಅವರಿಗೆ ನಮ್ಮ ಮೊದಲ ಆದ್ಯತೆ ಎಂದು ಸ್ಪಷ್ಠನೆ ಕೊಟ್ಟರು.
ಧವನ್ 10-12 ದಿನಗಳಲ್ಲಿ ತಂಡ ಸೇರ್ಪಡೆ:
ಧವನ್ ಆರೋಗ್ಯದ ಬಗ್ಗೆ ತಿಳಿಸಿದ ಬಂಗಾರ್, ಧವನ್ ವೈದ್ಯರ ತಂಡದ ನಿಗಾದಲ್ಲಿದ್ದಾರೆ. ಅವರು ಐಸಿಸಿ ಟೂರ್ನಿಯಲ್ಲಿ ಭಾರತ ತಂಡದ ಆಧಾರ ಸ್ಥಂಭವಾಗಿರುವ ಹಿನ್ನೆಲೆಯಲ್ಲಿ 10-12 ದಿನಗಳಲ್ಲಿ ತಂಡ ಸೇರಿಕೊಳ್ಳಲಿದ್ದಾರೆ. ನಾಳಿನ ಪಂದ್ಯದಲ್ಲಿ ರಾಹುಲ್, ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂದರು.
15 ಆಟಗಾರರ ತಂಡದಲ್ಲೂ ಇಲ್ಲ ಪಂತ್
ಬಿಸಿಸಿಐ ಕರೆಯ ಮೇರೆಗೆ ಇಂಗ್ಲೆಂಡ್ ತಲುಪಿರುವ ವಿಕೆಟ್ ಕೀಪರ್ ರಿಷಭ್ ಪಂತ್, ವಿಶ್ವಕಪ್ನಲ್ಲಿ ಆಡುವ 15 ಸದಸ್ಯರ ತಂಡದ ಭಾಗವಾಗಿರಲ್ಲ. ಅಲ್ಲೂ ಕೂಡ ಅವರು ಸ್ಟ್ಯಾಂಡ್ ಬೈ ಆಟಗಾರನಾಗಿರುತ್ತಾರೆ. ಒಂದು ವೇಳೆ ಧವನ್ ಸಂಪೂರ್ಣ ಗುಣಮುಖರಾಗದಿದ್ದರೆ ಮಾತ್ರ, ಅವರನ್ನು ತಂಡಕ್ಕೆ ಸೇರ್ಪಡಿಸಿಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.