ಚಿಕ್ಕಮಗಳೂರು: ವಯೋಸಹಜ ಕಾಯಿಲೆಯಿಂದ ಪೊಲೀಸ್ ಶ್ವಾನ ಸಾವಿಗೀಡಾದ ಘಟನೆ ನಗರದಲ್ಲಿ ನಡೆದಿದೆ.
12 ವರ್ಷದ ಪೊಲೀಸ್ ಇಲಾಖೆಯ ಶ್ವಾನ ಹನಿ ಇಂದು ಸಾವನ್ನಪ್ಪಿದ್ದು, ಈ ಹನಿ ಅನೇಕ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖಪಾತ್ರ ವಹಿಸಿತ್ತು. ಅಲ್ಲದೇ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳ ಭದ್ರತೆಯಲ್ಲಿ ಭಾಗಿಯಾಗಿದ್ದ ಅನುಭವ ಹೊಂದಿತ್ತು.
ಕಳೆದ ಒಂದು ವಾರದಿಂದ ಇದು ಕಾಯಿಲೆಯಿಂದ ಬಳಲುತ್ತಿತ್ತು. ಅನ್ನ, ಅಹಾರ ತ್ಯಜಿಸಿದ್ದ ಹನಿ ಇಂದು ಬೆಳಗ್ಗೆ ಕೊನೆಯುಸಿರೆಳೆದಿದೆ. ನಗರದ ರಾಮನಹಳ್ಳಿಯ ಡಿಎಆರ್ ಪೊಲೀಸ್ ಆವರಣದಲ್ಲಿ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದ ಪೊಲೀಸರು ಸಕಲ ಸರ್ಕಾರಿ ಗೌರವದೊಂದಿಗೆ ಹನಿಯ ಅಂತ್ಯ ಸಂಸ್ಕಾರ ನೆರೆವೇರಿಸಿದರು.
ಹನಿಯ ಅಂತ್ಯ ಸಂಸ್ಕಾರದಲ್ಲಿ ಎಸ್ಪಿ ಹರೀಶ್ ಪಾಂಡೆ ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿ ಭಾಗಿಯಾಗಿದ್ದರು.