ಶಿರಸಿ: ಜಾನಪದ ಕಲೆ ಯಕ್ಷಗಾನದ ಪ್ರಸಿದ್ಧ ಭಾಗವತರಾದ ನೆಬ್ಬೂರು ನಾರಾಯಣ ಹೆಗಡೆ ಅವರು ಶನಿವಾರ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ಕರುಣಾ ರಸದ ಹಾಡುಗಾರಿಕೆಯಲ್ಲಿ ಖ್ಯಾತಿ ಪಡೆದ ನೆಬ್ಬೂರರನ್ನು ಕಳೆದುಕೊಂಡಿದ್ದಕ್ಕೆ ಯಕ್ಷಲೋಕ ಮರುಗುತ್ತಿದೆ.
ಉತ್ತರ ಕನ್ನಡದ ಸಿದ್ದಾಪುರದ ನೆಬ್ಬೂರಿನಲ್ಲಿ ಜನಿಸಿದ ನಾಯಾರಣ ಹೆಗಡೆ ನೆಬ್ಬೂರ್ ಭಾಗವತರೆಂದೇ ಪ್ರಸಿದ್ಧರು. ಬಡಗುತಿಟ್ಟಿನ ಭಾಗವತರಾಗಿದ್ದ ಇವರು, ಕೆರೆಮನೆ ಮೇಳದಲ್ಲಿ 1957 ರಿಂದ 2010ರವರೆಗೆ ಭಾಗವತರಾಗಿ ಕೆಲಸ ಮಾಡಿದ್ದರು. ಹಲವು ಭಾಗವತರಿಗೆ ಗುರುವಾಗಿದ್ದ ಇವರ ರಾಮ ನಿರ್ಯಾಣ, ಸತ್ಯ ಹರಿಶ್ಚಂದ್ರ ಪ್ರಸಂಗದ ಹಾಡುಗಳು ಪ್ರಸಿದ್ಧವಾಗಿದ್ದವು. ಕೇಳುಗರ ಮೈ ಮರೆಸುತ್ತಿದ್ದ ಅವರ ಗಾಯನಕ್ಕೆ ಸಾವಿರಾರು ಶ್ರೋತೃಗಳಿದ್ದರು. ಉನ್ನತ ಮಟ್ಟಕ್ಕೇರಿದರೂ ಸಾಂಪ್ರದಾಯಿಕತೆ ಬಿಟ್ಟು ಹೋದವರಲ್ಲ ಎನ್ನುವುದು ಅವರ ಹೆಗ್ಗಳಿಕೆಯಾಗಿದೆ.
ಬಡತನದಲ್ಲಿ ಹುಟ್ಟಿ ಬೆಳೆದ ಅವರಿಗೆ ಯಕ್ಷಗಾನವೇ ಆದಾಯದ ಮೂಲವಾಗಿತ್ತು. ಸ್ವಂತ ಮನೆ ಬಿಟ್ಟರೆ ಯಾವ ಆಸ್ತಿಯನ್ನು ಹೊಂದಿರಲಿಲ್ಲ. ಕುಟುಂಬವನ್ನು ಕಲೆಯಿಂದ ಬಂದ ಆದಾಯದಲ್ಲೇ ನಿರ್ವಹಿಸಿದವರು. ಅನಾರೋಗ್ಯಕ್ಕೆ ತುತ್ತಾದಾಗ ಹಲವು ಕಲಾ ಪ್ರೇಮಿಗಳು ಸಹಾಯ ಮಾಡಲು ಮುಂದಾಗಿದ್ದು ಅವರ ಜನಪ್ರಿಯತೆಗೆ ಸಾಕ್ಷಿ. ಆದರೆ, ಅವರು ಯಾರ ಹತ್ತಿರವು ಸಹಾಯ ಬೇಡದೆ ಮಾದರಿಯಾಗಿದ್ದು, ಅವರ ಸ್ವಾಭಿಮಾನದ ಬದುಕನ್ನು ಏತ್ತಿ ತೋರಿಸುತ್ತದೆ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ ಹೇಳಿದರು.
ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ನೀಡುವ ಮತ್ತು ರಾಜ್ಯ ಸರ್ಕಾರದ ಪ್ರಶಸ್ತಿಗಳೊಂದಿಗೆ ನೂರಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದ ನಾರಾಯಣ ಭಾಗವತರ ಅಭಿಮಾನಿಗಳೆಲ್ಲ ಸೇರಿ 2012ರಲ್ಲಿ ನೆಬ್ಬೂರು ನಾರಾಯಣ ಹೆಗಡೆ ಯಕ್ಷ ಪ್ರತಿಷ್ಠಾನ ಆರಂಭಿಸಿದ್ದಾರೆ. ಇದರ ಅಡಿಯಲ್ಲಿ ಯಕ್ಷ ಸೌರಭ ಎನ್ನುವ ಯಕ್ಷಗಾನ ತರಬೇತಿ ಶಾಲೆ ಆರಂಭಿಸಲಾಗಿದೆ. ಅಲ್ಲಿ ನೂರಾರು ವಿದ್ಯಾರ್ಥಿಗಳು ಅಧ್ಯಯನ ಪ್ರಾರಂಭಿಸಿದ್ದಾರೆ. ಹಲವರು ಈಗಾಗಲೇ ಕಲಾವಿದರಾಗಿ ಹೊರಹೊಮ್ಮಿದ್ದಾರೆ. ಪ್ರತಿಷ್ಠಾನದ ವತಿಯಿಂದ ಭಾಗವತರ ಆಯ್ದ 100ಕ್ಕೂ ಹೆಚ್ಚು ಪದ್ಯಗಳನ್ನು ದಾಖಲಿಸಲಾಗಿದೆ. ಅವರ ಹೆಸರನ್ನು ಉಳಿಸೋ ಕೆಲಸ ಪ್ರತಿಷ್ಠಾನದಿಂದ ಆಗುತ್ತದೆ ಎಂದು ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಜಿ.ಎನ್.ಹೆಗಡೆ ತಿಳಿಸಿದರು.
ಒಟ್ಟಿನಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದ ನೆಬ್ಬೂರು ಭಾಗವತರನ್ನು ಕಳೆದುಕೊಂಡು ಯಕ್ಷಗಾನ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂಬುದು ಎಲ್ಲರ ಮನದ ಮಾತು.