ನವದೆಹಲಿ: 17ನೇ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಿದ್ದು, ಮೋದಿ 2ನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ.
353 ಕ್ಷೇತ್ರಗಳಲ್ಲಿ ಎನ್ಡಿಎ ಗೆಲುವು ದಾಖಲಿಸಿದ್ದು,ಮೇ 30ರಂದು 2ನೇ ಅವಧಿಗೆ ಪ್ರಧಾನಿಯಾಗಿ ಪ್ರತಿಜ್ಞಾವಿಧಿ ಸ್ವೀಕಾರ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ,ಇದಕ್ಕೂ ಮುನ್ನ ನರೇಂದ್ರ ಮೋದಿ ಗುಜರಾತ್ಗೆ ಪ್ರಯಾಣ ಬೆಳಸಿ ತಾಯಿ ಹೀರಾಬೇನ್ ಆಶೀರ್ವಾದ ಪಡೆದುಕೊಳ್ಳಲಿದ್ದಾರೆ. ನಿನ್ನೆ ಹೊರಬಿದ್ದ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಅಭೂತಪೂರ್ವ ವಿಜಯ ದಾಖಲಿಸಿದ್ದು ಮೋದಿ ತಾಯಿ ಸಂತಸ ವ್ಯಕ್ತಪಡಿಸಿದ್ದರು.
ಈ ಹಿಂದೆ ಮತದಾನ ಮಾಡಲು ಗುಜರಾತ್ನ ಗಾಂಧಿ ನಗರಕ್ಕೆ ತೆರಳಿದ್ದ ಮೋದಿ, ತಾಯಿ ಆಶೀರ್ವಾದ ಪಡೆದುಕೊಂಡಿದ್ದರು. ಇದೀಗ ಪ್ರಮಾಣ ವಚನಕ್ಕೂ ಮುನ್ನ ತವರು ರಾಜ್ಯಕ್ಕೆ ತೆರಳಿ ಮತ್ತೆ ತಾಯಿಯ ಆಶೀರ್ವಾದ ಪಡೆದುಕೊಳ್ಳುವ ಸಾಧ್ಯತೆ ಇದೆ.ಇನ್ನು ಮೇ 28ರಂದು ನಮೋ ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಗೂ ಭೇಟಿ ನೀಡಲಿದ್ದಾರೆಂದು ತಿಳಿದು ಬಂದಿದೆ. ಇದೇ ವೇಳೆ ಅಲ್ಲಿನ ಮತದಾರರೊಂದಿಗೆ ಸಂವಾದ ನಡೆಸಲಿದ್ದಾರೆ.
2014ರಲ್ಲಿ ಮೋದಿ ನೇತೃತ್ವದಲ್ಲಿ ಪ್ರಚಂಡ ಬಹುಮತ ಗಳಿಸಿದಾಗ ಕೂಡ ನರೇಂದ್ರ ಮೋದಿ ಗುಜರಾತ್ಗೆ ತೆರಳಿ ತಾಯಿ ಹೀರಾಬೇನ್ ಅವರ ಆಶೀರ್ವಾದ ಪಡೆದುಕೊಂಡಿದ್ದರು.