ಹರಿಹರ: ನಕಲಿ ಕಟ್ಟಡ ಕಾರ್ಮಿಕ ಕಾರ್ಡ್‌ದಾರರು ಸರ್ಕಾರದ ಪರಿಹಾರ ಹಣವನ್ನು ದುರುಪಯೋಗಪಡಿಸಿಕೊಂಡಿದ್ದು, ಅಂತಹವರನ್ನು ಪತ್ತೆ ಹಚ್ಚಿ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಶ್ರೀ ಹರಿಹರೇಶ್ವರ ಕಟ್ಟಡ ಕಾರ್ಮಿಕರ ಸಂಘದ ಸದಸ್ಯರು ತಹಶೀಲ್ದಾರ್ ಗ್ರೇಡ್- 2 ಚನ್ನವೀರಸ್ವಾಮಿ ಅವರಿಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಎಚ್. ಭೀಮಣ್ಣ, ಲಾಕ್‌ಡೌನ್ ನಿಮಿತ್ತ ರಾಜ್ಯ ಸರ್ಕಾರ ನೀಡಿದ ತಲಾ 5 ಸಾವಿರ ರೂ. ಪರಿಹಾರದಲ್ಲಿ ಅರ್ಧದಷ್ಟು ಹಣ ನಕಲಿ ಕಟ್ಟಡ ಕಾರ್ಮಿಕ ಕಾರ್ಡ್ ದಾರರ ಪಾಲಾಗಿದೆ. ಗಣನೀಯ ಸಂಖ್ಯೆಯ ನಿಜವಾದ ಕಾರ್ಮಿಕರಿಗೆ ಪರಿಹಾರ ತಲುಪಿಲ್ಲ ಎಂದು ಆರೋಪಿಸಿದರು.
2018-19ನೇ ಸಾಲಿನಲ್ಲಿ ನೋಂದಣಿ ಮಾಡಿಸಿದ ಕಾರ್ಡ್ದಾರರಿಗೆ ಮಾತ್ರ ಪರಿಹಾರ ಹಣ ಬಂದಿದೆ. 8-10 ವರ್ಷಗಳ ಹಿಂದೆ ನೋಂದಣಿ ಮಾಡಿಸಿದ ನಂತರ ರಿನ್ಯೂವಲ್ ಮಾಡಿಸಿದ ಕಾರ್ಮಿಕರಿಗೆ ಪರಿಹಾರ ಸಿಕ್ಕಿಲ್ಲ. ನಿಜವಾದ ಫಲಾನುಭವಿಗಳಿಗೆ ಪರಿಹಾರದ ಮೊತ್ತವನ್ನು ಕೂಡಲೇ ವಿತರಣೆ ಮಾಡಬೇಕೆಂದು ಆಗ್ರಹಿಸಿದರು.
ಕಾರ್ಯದರ್ಶಿ ಗುರು ಶಿವಳ್ಳಿ ಮಾತನಾಡಿ, ನಕಲಿ ಕಾರ್ಡ್ದಾರರನ್ನು ಪತ್ತೆ ಮಾಡಿ ಪರಿಹಾರ ಹಣವನ್ನು ವಾಪಸ್ ಪಡೆದು ಶಿಕ್ಷೆ ವಿಧಿಸಬೇಕು ಎಂದರು.
ಈ ವೇಳೆ ಪದಾಧಿಕಾರಿಗಳಾದ ಎಚ್. ಅಂಜನಪ್ಪ, ಹನುಮಂತಪ್ಪ ಎಸ್.ಬಿ, ಚೂರಿ ಜಗದೀಶ್, ಎಚ್. ಮಲ್ಲೇಶಪ್ಪ, ಎಸ್. ಬೀರಪ್ಪ, ಹಾಲೇಶ್, ಸಿ. ಭದ್ರಾಚಾರಿ, ಪರಶುರಾಮ ಪೇಂಟರ್, ರಾಮಣ್ಣ ಹುಣಸಿಕಟ್ಟೆ, ರಾಜಾ ನಾಯಕ್, ರಮೇಶ್ ಪ್ಲಂಬರ್, ರಾಜಪ್ಪ ಇಟ್ಟಿಗುಡಿ, ಮಲಕಪ್ಪಗೌಡ, ಸುಭಾಶ್ ಬಾರ್ ಬೆಂಡರ್, ಪಂಪಾಪತಿ ಪ್ಲಂಬರ್ ಇತರರಿದ್ದರು.