ಲಾಹೋರ್: ಪಾಕಿಸ್ತಾನದ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿರುವ ಆರಂಭಿಕ ಆಟಗಾರ ಅಬಿದ್ ಅಲಿಗೆ ಬ್ಯಾಟಿಂಗ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿ ಮಾಡಿ ಒಂದು ಬಾರಿ ಅಪ್ಪಿಕೊಳ್ಳಬೇಕೆಂಬ ಆಸೆ ಇದೆಯಂತೆ.
ಮೂರು ದಿನಗಳ ಹಿಂದೆಯಷ್ಟೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿಶ್ವಕಪ್ ತಂಡಕ್ಕೆ ಗೋಷಿಸಿದ್ದ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿರುವ ಅಬಿದ್ಗೆ ಸಚಿನ್ ರೋಲ್ ಮಾಡೆಲ್ ಆಗಿದ್ದಾರಂತೆ. ಇದೇ ಕಾರಣದಿಂದ ಜೀವನದಲ್ಲಿ ಒಂದು ಬಾರಿಯಾದರೂ ಸಚಿನ್ರನ್ನು ಭೇಟಿ ಮಾಡಬೇಕೆಂಬ ಕನಸಿದ್ದು, ಅದು ಸದ್ಯದಲ್ಲೇ ಇಂಗ್ಲೆಂಡ್ನಲ್ಲಿ ನಡೆಯುವ ವಿಶ್ವಕಪ್ನಲ್ಲಿ ಸಾಧ್ಯವಾಗಲಿದೆ ಎಂದು ಭಾವಿಸಿದ್ದೇನೆ ಅಂತಾ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ನಾನು ಕೆರಿಯರ್ ಶುರು ಮಾಡಿದಾಗಿನಿಂದಲೂ ಸಚಿನ್ರ ಆಟವನ್ನು ನೋಡಿಕೊಂಡು ಅವರ ಬ್ಯಾಟಿಂಗ್ ತಂತ್ರಗಾರಿಕೆಯನ್ನು ಅನುಸರಿಸುತ್ತಿದ್ದೇನೆ. ಅವರೊಬ್ಬ ವಿಶ್ವಶ್ರೇಷ್ಠ ಆಟಗಾರನಾಗಿದ್ದು , ನಾನೂ ಕೂಡ ಅವರಂತಾಗಬೇಕೆಂದು ಕೊಂಡಿದ್ದೇನೆ. ಅವರನ್ನು ನಾನು ಭೇಟಿ ಮಾಡಲು ನನಗೆ ಖಂಡಿತಾ ಅವಕಾಶ ಮಾಡಿಕೊಡುತ್ತಾರೆಂಬ ವಿಶ್ವಾಸವಿದೆ. ಹಾಗೊಮ್ಮೆ ಅವಕಾಶ ದೊರೆತರೆ ಅವರನ್ನು ಒಮ್ಮೆ ಅಪ್ಪಿಕೊಳ್ಳುತ್ತೇನೆ, ಅವರಿಂದ ಬ್ಯಾಟಿಂಗ್ ಟಿಪ್ಸ್ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.
ಎರಡು ದೇಶಗಳ ರಾಜಕೀಯ ಸ್ಥಿತಿ ಸರಿಯಿಲ್ಲದಿರುವುದನ್ನು ಬಿಟ್ಟರೆ, ಆಟ ಎಂದು ಬಂದಾಗ ಎರಡೂ ತಂಡದ ಪ್ಲೇಯರ್ಗಳು ಬಹಳ ಎಂಜಾಯ್ ಮಾಡುತ್ತಾರೆ. ಕಳೆದ ಟಿ-20 ವಿಶ್ವಕಪ್ ವೇಳೆ ಭಾರತ ತಂಡದ ವಿರಾಟ್ ಕೊಹ್ಲಿ ತಮ್ಮ ಬ್ಯಾಟನ್ನು ನಮ್ಮ ತಂಡದ ಬೌಲರ್ ಮೊಹಮ್ಮದ್ ಅಮೀರ್ಗೆ ನೀಡಿದ್ದು ಅವರ ದೊಡ್ಡಗುಣ ಎಂದು ಕೊಹ್ಲಿಯನ್ನ ಗುಣಗಾನ ಮಾಡಿದರು.