ಬೆಂಗಳೂರು: ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಪ್ರಭಾವ ಬೀರಿದ ಪ್ರಧಾನಿ ನರೇಂದ್ರ ಮೋದಿ ಸುನಾಮಿ ಅಲೆಗೆ ರಾಜ್ಯದ ನಾಲ್ವರು ಘಟಾನುಘಟಿಗಳು ಸೋತು ಸುಣ್ಣವಾಗಿದ್ದಾರೆ. ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಸೋಲನ್ನೆ ಅನುಭವಿಸದೆ ಸೋಲಿಲ್ಲದ ಸರದಾರರು ಎಂದು ಬಿರುದು ಪಡೆದಿದ್ದ ನಾಲ್ವರು ಸಂಸದರು ಈ ಸಾರಿ ಮಕಾಡೆ ಮಲಗಿದ್ದಾರೆ.
ಬಹುತೇಕ ಎಲ್ಲರದ್ದೂ ಇದು ಕಡೆಯ ಚುನಾವಣೆ ಎನ್ನುವುದು ಗಮನಾರ್ಹ ಸಂಗತಿ. 1972ರಿಂದ ಇಲ್ಲಿಯವರೆಗೂ 9 ಸಾರಿ ಶಾಸಕರಾಗಿ ಹಾಗೂ 2009ರಿಂದ ಎರಡು ಬಾರಿ ಸತತವಾಗಿ ಲೋಕಸಭೆಗೆ ಆಯ್ಕೆಯಾಗಿ ಬಿಸಿಲ ನಾಡಲ್ಲಿ ತಮ್ಮದೇ ವರ್ಚಸ್ಸು ಬೆಳೆಸಿದ್ದ ಮಲ್ಲಿಕಾರ್ಜುನ ಖರ್ಗೆ ಲೋಕಸಭೆಯ ಸಮರದಲ್ಲಿ ಮೂರನೇ ಬಾರಿ ಗೆಲ್ಲುವ ವಿಶ್ವಾಸದಲ್ಲಿದ್ದರು. ಆದರೆ, ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿಯ ಡಾ.ಉಮೇಶ್ ಜಿ. ಜಾಧವ್ ವಿರುದ್ಧ 95,168 ಮತಗಳ ಅಂತರದ ಹೀನಾಯ ಸೋಲನ್ನು ಕಂಡಿದ್ದಾರೆ.
ಮೋದಿ, ಅಮಿತ್ ಶಾ ರಂತಹ ಬಿಜೆಪಿಯ ಚಾಣಕ್ಯರು ಕಲಬುರ್ಗಿಯಲ್ಲಿ ಜಾಧವ್ ಪರ ಭರ್ಜರಿ ಪ್ರಚಾರ ಮಾಡಿದ್ದರು. ಇವರಿಗೆ ಪ್ರತಿಯಾಗಿ ಮಲ್ಲಿಕಾರ್ಜುನ ಖರ್ಗೆ ಕೂಡಾ ಸಾಕಷ್ಟು ಸಮಾವೇಶಗಳನ್ನು ಮಾಡಿದ್ದರು. ಈ ಬಾರಿಯ ಜನಾಭಿಪ್ರಾಯ ಅವರ ಸತತ ಗೆಲುವಿನ ಓಟಕ್ಕೆ ತಡೆ ನೀಡಿದೆ.
ಇನ್ನೊಂದೆಡೆ ಇದು ಕಡೆಯ ಚುನಾವಣೆ ಎಂದೇ ಹೇಳಿಕೊಂಡು ಕೋಲಾರದಿಂದ ಸ್ಪರ್ಧಿಸಿದ್ದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ವಿರುದ್ಧ ಹೀನಾಯ ಸೋಲುಂಡಿದ್ದಾರೆ. 71 ವರ್ಷದ ಈ ಹಿರಿಯ ಕಾಂಗ್ರೆಸ್ ನಾಯಕ ಸತತ 7 ಬಾರಿ ಕೋಲಾರದಿಂದ ಸಂಸತ್‍ಗೆ ಆಯ್ಕೆಯಾಗಿದ್ದರು. ಈ ಸಾರಿ ಸ್ವಪಕ್ಷೀಯರೇ ಕೈಕೊಟ್ಟ ಹಿನ್ನೆಲೆ ಅವರಿಗೆ ಮುನಿಸ್ವಾಮಿ ವಿರುದ್ಧ 2,10,021 ಮತಗಳ ಅಂತರದ ಹೀನಾಯ ಸೋಲು ಎದುರಾಗಿದೆ.
ಮಾಜಿ ಸಿಎಂಗೆ ಆಘಾತ:
ಕಳೆದ ಎರಡು ಅವಧಿಯಿಂದ ಚಿಕ್ಕಬಳ್ಳಾಪುರದಿಂದ ಗೆಲ್ಲುತ್ತಿದ್ದ ಮಾಜಿ ಸಿಎಂ ಡಾ.ಎಂ.ವೀರಪ್ಪ ಮೊಯ್ಲಿ ಅಕ್ಷರ ಸಹ ನೆಲಕಚ್ಚಿದ್ದಾರೆ. ಸತತ ಸೋಲು ಕಂಡಿದ್ದ ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ಜಯಭೇರಿ ಬಾರಿಸಿದ್ದಾರೆ. ಇವರಿಗೂ ಇದು ಕಡೆಯ ಲೋಕಸಭೆ ಚುನಾವಣೆ ಸ್ಪರ್ಧೆ ಆಗಿತ್ತು ಎನ್ನುವುದ ವಿಶೇಷ. ಬಚ್ಚೇಗೌಡರ ವಿರುದ್ಧ ಒಟ್ಟು 1,82,110 ಮತಗಳ ಅಂತರದ ಹೀನಾಯ ಸೋಲು ಕಂಡಿದ್ದಾರೆ.
ಇವರ ಸಾಲಿನಲ್ಲೆ ಸಾಗಿದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಕೂಡ ಕ್ಷೇತ್ರ ಬದಲಿಸಿ ಸೋಲು ಕಂಡಿದ್ದಾರೆ. ಕಡೆಯವರೆಗೂ ಸ್ಪರ್ಧಿಸುವ ವಿಚಾರದಲ್ಲಿ ಗೊಂದಲ ಹೊಂದಿದ್ದ ಅವರು ತಮ್ಮ ಸ್ವಕ್ಷೇತ್ರ ಹಾಸನವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಬಿಟ್ಟುಕೊಟ್ಟು ತುಮಕೂರಿನಿಂದ ಕಣಕ್ಕಿಳಿದಿದ್ದರು. ಆದರೆ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆಪ್ತರಾದ ಮಾಜಿ ಸಂಸದ ಜಿ.ಎಸ್.ಬಸವರಾಜ್ ವಿರುದ್ಧ 13,339 ಮತಗಳ ಅಂತರದಿಂದ ಸೋತಿದ್ದಾರೆ. 86ರ ಇಳಿ ವಯಸ್ಸಿನ, ಅತ್ಯಂತ ಹಿರಿಯ ಉಮೇದುವಾರ ಎನ್ನುವ ಹೆಗ್ಗಳಿಕೆ ಕೂಡ ಹೊಂದಿದ್ದರು.
ಈ ಬಾರಿಯೂ ಮೋದಿ ಅಲೆಯಲ್ಲಿ ಅನುಭವಿ ಹಾಗೂ ಸೋಲೇ ಕಾಣದ ನಾಯಕರು ಕೊಚ್ಚಿ ಹೋಗಿದ್ದಾರೆ.