ಕಲಬುರಗಿ: ನಿತ್ಯದ ಜೀವನದಲ್ಲಿ ಮನುಷ್ಯ ಅನೇಕ ಒತ್ತಡಗಳಿಂದ ಮಾನಸಿಕ ಕಾಯಿಲೆಗೆ ತುತ್ತಾಗುವುದು ಸಹಜ. ಯಾವುದಕ್ಕೂ ಸಂಕೋಚ ಪಡಸೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಹಾಗೂ ಸಲಹೆ ಪಡೆಯುವ ಮೂಲಕ ಸಂತೃಪ್ತ ಜೀವನ ನಡೆಸಬೇಕು ಎಂದು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ ಹೇಳಿದರು.
ಇಲ್ಲಿನ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೇಂದ್ರ ಕಾರಾಗೃಹ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಕೇಂದ್ರ ಕಾರಾಗೃಹದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಸ್ಕೀಜೋಫ್ರೇನಿಯಾ ದಿನ ಹಾಗೂ ಚಿಕಿತ್ಸಾ ಶಿಬಿರ, ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ, ತಾಲೂಕು ಹಾಗೂ ಪ್ರಾಥಮಿಕ ಆರೊಗ್ಯ ಕೇಂದ್ರಗಳಲ್ಲಿ ಮನೋರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ಲಭ್ಯವಿದೆ. ರೋಗಿಗಳು ಇದರ ಲಾಭ ಪಡೆಯಬಹುದು ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ರಾಜಕುಮಾರ ಕುಲಕರ್ಣಿ ಸಲಹೆ ನೀಡಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ಮೊಹಮ್ಮದ ಮುನಾವರ ಹುಸೇನ್ ಇದ್ದರು. ಕೇಂದ್ರ ಕಾರಾಗೃಹದ ಪೊಲೀಸ್ ಮುಖ್ಯ ಅಧೀಕ್ಷಕ ಕೃಷ್ಣ ಕುಮಾರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಅಮೂಲ ಪತಂಗೆ, ತಜ್ಞ ವೈದ್ಯ ಸಂತೋಷ ಗೊಳೆ ಪ್ರಸ್ತಾವಿಕವಾಗಿ ಮಾತನಾಡಿದರು. ಡಾ. ಅಣ್ಣಾರಾವ ಮಾಲಿ ಪಾಟೀಲ, ಡಾ ಬಸವರಾಜ ಕಿರಣಗಿ ಸೇರಿದಂತೆ ಹಿರಿಯ ವೈದ್ಯಾಧಿಕಾರಿಗಳು ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ತಂಡದವರು ಇದ್ದರು.