ರಾಂಚಿ: ಜಾರ್ಖಂಡ್ನ ಸಾರಾಯಕೆಲಾ ಪ್ರದೇಶದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದು, ಐವರು ಪೊಲೀಸರು ಹುತಾತ್ಮರಾಗಿದ್ದಾರೆ. ಕರ್ತವ್ಯ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಪೊಲೀಸರ ವಾಹನದ ಮೇಲೆ ಇಬ್ಬರು ನಕ್ಸಲರು ಗುಂಡಿನ ಸುರಿಮಳೆಗೈದಿದ್ದಾರೆ.
ವಾಹನದಲ್ಲಿ ಆರು ಪೊಲೀಸರು ತೆರಳುತ್ತಿದ್ದರು ಎಂಬ ಮಾಹಿತಿ ಇದೆ. ಓರ್ವ ಪೊಲೀಸ್ ಘಟನೆಯಿಂದ ತಪ್ಪಿಸಿಕೊಂಡಿದ್ದು, ಠಾಣೆಗೆ ತೆರಳಿ ಸುದ್ದಿ ತಲುಪಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದರು. ಆಗ ಓರ್ವ ಯೋಧ ಹುತಾತ್ಮಗೊಂಡು, ನಾಲ್ವರು ಗಾಯಗೊಂಡಿದ್ದರು.
ಘಟನೆ ನಡೆಯುತ್ತಿದ್ದಂತೆ ಸ್ಥಳವನ್ನು ಪೊಲೀಸರು ಸುತ್ತುವರೆದಿದ್ದು, ನಕ್ಸಲರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಘಟನೆಯನ್ನು ಜಾರ್ಖಂಡ್ ಮುಖ್ಯಮಂತ್ರಿ ರಘುವರ್ ದಾಸ್ ಖಂಡಿಸಿದ್ದು, ನಕ್ಸಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.