ಬೆಂಗಳೂರು: ಕಣ್ವ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ಸಕ್ಷಮ ಪ್ರಾಧಿಕಾರ ಮುಂದಿನ ಎರಡು ವಾರಗಳಲ್ಲಿ ಸಲ್ಲಿಸದಿದ್ದರೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಕಣ್ವ ಅವ್ಯವಹಾರ ಪ್ರಕರಣದ ತನಿಖೆ ಕೋರಿ ಕೆ.ಎಸ್. ರಮೇಶ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವ ವಿಭಾಗೀಯ ಪೀಠ ಈ ಎಚ್ಚರಿಕೆ ನೀಡಿದೆ. ಸರ್ಕಾರ ಜೂನ್ 3ರಂದು ಸಲ್ಲಿಸಿರುವ ಅನುಪಾಲನಾ ವರದಿಯನ್ನು ನ್ಯಾಯಾಲಯ ಪರಿಶೀಲಿಸಿದೆ. ಆದರೆ 2021ರ ಏ.12ರಂದು ಪೀಠ ನೀಡಿದ್ದ ನಿರ್ದೇಶನದಂತೆ ಸಕ್ಷಮ ಪ್ರಾಧಿಕಾರ ವರದಿ ಸಲ್ಲಿಸಿಲ್ಲ. ಹೀಗಾಗಿ 2 ವಾರಗಳಲ್ಲಿ ಸಕ್ಷಮ ಪ್ರಾಧಿಕಾರ ಸರಿಯಾದ ಕ್ರಮದಲ್ಲಿ ವರದಿ ಸಲ್ಲಿಸಬೇಕು, ಇಲ್ಲದಿದ್ದರೆ ಮುಖ್ಯ ಕಾರ್ಯದರ್ಶಿ ವಿರುದ್ಧ ನ್ಯಾಯಾಂಗ ನಿಂದನೆ ಅಡಿ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿ, ಜೂ. 25ಕ್ಕೆ ವಿಚಾರಣೆ ಮುಂದೂಡಿದೆ.
ಇದೇ ವೇಳೆ, ಸೊಸೈಟಿಗೆ ನೇಮಿಸಿರುವ ಆಡಳಿತಾಧಿಕಾರಿ ಸಲ್ಲಿಸಿರುವ ವರದಿಯನ್ನು ಪರಿಶೀಲಿಸಿದ ಪೀಠ, ವರದಿಯ ಪ್ರತಿಯನ್ನು ಎಲ್ಲ ಅರ್ಜಿದಾರರಿಗೂ ನೀಡುವಂತೆ ರಿಜಿಸ್ಟ್ರಿಗೆ ನಿರ್ದೇಶನ ನೀಡಿದೆ. ಕಳೆದ ವಿಚಾರಣೆ ವೇಳೆ ರಾಜ್ಯ ಸರ್ಕಾರ ಹಾಗೂ ಸಕ್ಷಮ ಪ್ರಾಧಿಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಪೀಠ, ಹೂಡಿಕೆದಾರರ ಹಿತರಕ್ಷಣೆ ಸಂಬಂಧ ಸರಿಯಾದ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಆರೋಪಿ ಸಂಸ್ಥೆ ಕಣ್ವ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ವಿರುದ್ಧ ಕೆಪಿಐಡಿ ಕಾಯ್ದೆಯಡಿ ಲಭ್ಯವಿರುವ ಅಧಿಕಾರ ಚಲಾಯಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿತ್ತು.