ಬೆಂಗಳೂರು: ರಾಜ್ಯದ ವಿವಿಧ ಉದ್ದಿಮೆಗಳು ಮತ್ತು ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ 2020-21ನೇ ಸಾಲಿನ "ವ್ಯತ್ಯಸ್ಥ ತುಟ್ಟಿ ಭತ್ಯೆ" (ವಿಡಿಎ) ಏರಿಕೆ ಮೊತ್ತವನ್ನು ಪಾವತಿಸುವುದನ್ನು ಮುಂದೂಡಿ ಹೊರಡಿಸಿರುವ ಆದೇಶವನ್ನು ವಾಪಸ್ ಪಡೆಯುವ ಬಗ್ಗೆ ನಿಲುವು ತಿಳಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ವಿಡಿಎ ಮುಂದೂಡಿದ ಸರ್ಕಾರದ ಆದೇಶ ಪ್ರಶ್ನಿಸಿ ಕರ್ನಾಟಕ ಕೈಗಾರಿಕೆಗಳು ಹಾಗೂ ಇತರ ಸಂಸ್ಥೆಗಳ ನೌಕರರ ಒಕ್ಕೂಟ, ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಮತ್ತಿತರ ಸಂಘಟನೆಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ವಾದಿಸಿ, 2020ರ ಏಪ್ರಿಲ್ 1ರಿಂದ 2021ರ ಮಾರ್ಚ್ 31ರ ವರೆಗಿನ ಅವಧಿಗೆ ವತ್ಯಸ್ಥ ತುಟ್ಟಿ ಭತ್ಯೆ ಪಾವತಿ ಮುಂದೂಡಿ 2020ರ ಜುಲೈ 28 ರಂದು ಆದೇಶ ಹೊರಡಿಸಲಾಗಿತ್ತು. ಈಗ 2021ರ ಮಾರ್ಚ್ 31 ಕಳೆದಿರುವುದಿರಂದ ಅರ್ಜಿಗಳು ವಿಚಾರಣೆಯ ಮಾನ್ಯತೆ ಕಳೆದುಕೊಂಡಿವೆ ಎಂದರು.
ಅರ್ಜಿದಾರರ ಪರ ವಕೀಲರು ವಾದಿಸಿ, ಸರ್ಕಾರದ ಆದೇಶಕ್ಕೆ ಹೈಕೋರ್ಟ್ 2020ರ ನ.11ರಂದು ತಡೆಯಾಜ್ಞೆ ನೀಡಿದೆ. ತಡೆಯಾಜ್ಞೆ ಇರುವುದರಿಂದ ತುಟ್ಟಿ ಭತ್ಯೆ ಪಾವತಿಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ, ಕಾರ್ಮಿಕರಿಗೆ ಈವರೆಗೆ ತುಟ್ಟಿ ಭತ್ಯೆ ಸಿಕ್ಕಿಲ್ಲ ಎಂದು ತಿಳಿಸಿದರು.
ವಾದ ಪ್ರತಿವಾದ ಆಲಿಸಿದ ಪೀಠ, ಸರ್ಕಾರದ ಆದೇಶಕ್ಕೆ ತಡೆ ಇರುವಾಗ, ಅರ್ಜಿಗಳು ವಿಚಾರಣಾ ಮಾನ್ಯತೆ ಕಳೆದುಕೊಳ್ಳುವುದಿಲ್ಲ. ಸರ್ಕಾರ ತನ್ನ ಆದೇಶ ವಾಪಸ್ ಪಡೆದುಕೊಂಡರೆ ವ್ಯಾಜ್ಯ ತನ್ನಿಂತಾನೆ ಕೊನೆಗೊಳ್ಳುತ್ತದೆ. ಹಾಗಾಗಿ ವ್ಯತ್ಯಸ್ಥ ತುಟ್ಟಿ ಭತ್ಯೆ ಪಾವತಿ ಮುಂದೂಡಿ 2020ರ ಜುಲೈ 28ರಂದು ಹೊರಡಿಸಿರುವ ಆದೇಶ ಹಿಂಪಡೆಯುವ ಬಗ್ಗೆ ನಿಲುವು ತಿಳಿಸಿ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಜೂನ್ 22ಕ್ಕೆ ಮುಂದೂಡಿತು.