ನವದೆಹಲಿ: ಕೊನೆಯ ಹಂತದ ಮತದಾನಕ್ಕೂ ಕೆಲ ಗಂಟೆಗಳ ಮುನ್ನ ಪ್ರಧಾನಿ ಮೋದಿ ಕೇದಾರನಾಥಕ್ಕೆ ತೆರಳಿದ್ದು ದೊಡ್ಡಮಟ್ಟದಲ್ಲಿ ಸುದ್ದಿಯಾಗಿದೆ. ಇದರ ಬೆನ್ನಲ್ಲೇ ಮೋದಿ ಧ್ಯಾನಕ್ಕೆ ಕುಳಿತ ಗುಹೆಯ ಬಗ್ಗೆಯೂ ಒಂದಷ್ಟು ಕುತೂಹಲಕಾರಿ ಮಾಹಿತಿ ತಿಳಿದು ಬಂದಿದೆ.
ಪ್ರಧಾನಿ ಮೋದಿ ಧ್ಯಾನಕ್ಕೆ ಕುಳಿತ ರುದ್ರ ಧ್ಯಾನ ಗುಹೆ ಅಸಲಿಗೆ ಮೋದಿಯವರ ಪರಿಕಲ್ಪನೆ. ಕೇದಾರನಾಥನ ಸನ್ನಿಧಿಯಿಂದ ಒಂದು ಕಿ.ಮೀ ಮೇಲ್ಭಾಗದಲ್ಲಿ ಮೋದಿ ಕನಸನ್ನು ಸಾಕಾರಗೊಳಿಸಲಾಗಿದೆ.
ಹೇಗಿದೆ ದರ?
ಕೇದಾರನಾಥನ ಪವಿತ್ರ ಕ್ಷೇತ್ರದಲ್ಲಿ ಧ್ಯಾನವನ್ನು ಮತ್ತಷ್ಟು ಉತ್ತೇಜಿಸುವ ಸಲುವಾಗಿ ಕಳೆದ ವರ್ಷ ಈ ರುದ್ರ ಧ್ಯಾನ ಕೇಂದ್ರದ ದರವನ್ನು ಕಡಿತಗೊಳಿಸಲಾಗಿದೆ.
ಎಲ್ಲ ರೀತಿಯ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ರುದ್ರ ಧ್ಯಾನ ಕೇಂದ್ರದ ಒಂದು ದಿನದ ದರ 990ರೂ. ವರ್ಷದ ಹಿಂದೆ ಈ ದರ ಬರೋಬ್ಬರಿ 3000ರೂಪಾಯಿ ಆಗಿತ್ತು.
ಯಾವ ಕಾರಣಕ್ಕೆ ಇಳಿಕೆಯಾಯ್ತು ದರ?
ಕಳೆದ ವರ್ಷ ಸಾರ್ವಜನಿಕರಿಗೆ ರುದ್ರ ಧ್ಯಾನ ಕೇಂದ್ರವನ್ನು ಮುಕ್ತಗೊಳಿಸಲಾಗಿತ್ತು. ದರ ಹೆಚ್ಚಿರುವುದರಿಂದ ಆರಂಭದಲ್ಲಿ ಉತ್ತಮ ಸ್ಪಂದನೆ ದೊರೆತಿರಲಿಲ್ಲ. ಬುಕ್ಕಿಂಗ್ ನೀರಸವಾಗಿತ್ತು. ಈ ಕಾರಣದಿಂದ 3,000ರೂ ನಿಂದ 900ರೂ.ಗೆ ಇಳಿಕೆ ಮಾಡಲಾಗಿದೆ.
ರುದ್ರ ಧ್ಯಾನ ಕೇಂದ್ರದಲ್ಲಿ ಏನೇನಿದೆ?
ವಿದ್ಯುತ್ ಸೌಲಭ್ಯ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯವನ್ನು ಈ ಗುಹೆ ಹೊಂದಿದೆ. ಗುಹೆಯ ಹೊರಭಾಗವನ್ನು ಮರದಿಂದ ನಿರ್ಮಿಸಲಾಗಿದೆ. ಈ ಗುಹೆಯಲ್ಲಿ ಧ್ಯಾನಕ್ಕಾಗಿ ಬುಕ್ಕಿಂಗ್ ಮಾಡಿದವರಿಗೆ ಅಲ್ಲಿನ ಆಡಳಿತ ಮಂಡಳಿ ಬೆಳಗಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಮಾತ್ರವಲ್ಲದೇ ದಿನದಲ್ಲಿ ಎರಡು ಬಾರಿ ಚಹಾ ನೀಡುತ್ತದೆ. ದಿನದ 24 ಗಂಟೆಯೂ ಸಿಬ್ಬಂದಿಯೋರ್ವ ಪ್ರವಾಸಿಗರ ಎಲ್ಲಾ ಅಗತ್ಯತೆಗಳನ್ನೂ ಪೂರೈಸುತ್ತಾನೆ.