ಭಟ್ಕಳ: ಕಳೆದ 3-4 ದಿನದ ಹಿಂದೆ ಅಬ್ಬರಿಸಿದ ಚಂಡಮಾರುತದಿಂದ ಮುರುಡೇಶ್ವರ ಸಮುದ್ರ ದಡದಲ್ಲಿದ್ದ ಸಾಕಷ್ಟು ದೋಣಿಗಳಿಗೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಮೀನುಗಾರರು ದೋಣಿಯನ್ನು ದೇವಸ್ಥಾನದ ಎದುರಿನ ರಸ್ತೆಯ ಅಕ್ಕ ಪಕ್ಕ ಇಟ್ಟು ರಕ್ಷಿಸಿಕೊಳ್ಳಲು ಮುಂದಾಗಿದ್ದಾರೆ.
ಬೈಲೂರು, ಕಾಯ್ಕಿಣಿ, ಮುರುಡೇಶ್ವರ ಭಾಗದ ಮೀನುಗಾರರು ಮುರುಡೇಶ್ವರದ ಸಮುದ್ರ ತೀರದ ಎರಡು ಕಡೆಗಳಲ್ಲಿ ದೋಣಿಗಳನ್ನು ಇಡುತ್ತಿದ್ದು, ಒಟ್ಟು ಸುಮಾರು 800 ಪಾತಿ ದೋಣಿ ಮತ್ತು 380 ನಾಡ ದೋಣಿಗಳಿವೆ. ಚಂಡಮಾರುತ ಮೂನ್ಸೂಚನೆಯ ಹಿನ್ನೆಲೆ ಮೀನುಗಾರರು ಸಮುದ್ರಕ್ಕೆ ತೆರಳದೇ ಮೀನುಗಾರಿಕೆ ನಿಷೇಧಿಸಿದ್ದರು. ಆದರೆ ಚಂಡಮಾರುತದ ಅಬ್ಬರ ಸಮುದ್ರದ ದಡದಲ್ಲಿರಿಸಿದ್ದ ದೋಣಿಗಳಿಗೆ ಹಾನಿಯುಂಟು ಮಾಡಿದೆ. ಪಾತಿ ದೋಣಿಯ ಬಲೆಗಳು ಸಹ ಹಾನಿಯಾಗಿದ್ದು ಮೀನುಗಾರರು ಸಂಕಷ್ಟ ಅನುಭವಿಸುವಂತಾಗಿದೆ.
ಚಂಡಮಾರುತದ ಅಬ್ಬರ ಇಳಿದ ಬಳಿಕ ಸ್ಥಳಕ್ಕೆ ಬಂದ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಹಾನಿಯ ವರದಿ ಸಿದ್ಧಪಡಿಸಿದ್ದು, ಇದರಲ್ಲಿ 77 ದೋಣಿಗಳ ಬಲೆ, ಕೆಲವು ದೋಣಿ ಹಾನಿ ಸಹಿತ ಕೆಲವೊಂದು ದೋಣಿಗಳು ನೀರು ಪಾಲಾಗಿರುವ ಬಗ್ಗೆ ವರದಿ ಮಾಡಿದೆ. ಈ ಬಗ್ಗೆ ಮುರುಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿ ಇಲಾಖೆಗೆ ನೀಡಬೇಕೆಂಬ ಸರ್ಕಾರದ ಆದೇಶದಂತೆ ನಾಡದೋಣಿ ಮೀನುಗಾರರ ಸಂಘದಿಂದ ದೂರು ಸಲ್ಲಿಸಲಾಗಿದೆ.
ಇವೆಲ್ಲದರ ಮಧ್ಯೆ ಚಂಡಮಾರುತದ ಅಬ್ಬರ ಇಳಿದ ಬಳಿಕ ಸಮುದ್ರದ ದಡದಲ್ಲಿ ದೋಣಿಗಳನ್ನು ಇಡಲು ಸಮರ್ಪಕವಾದ ಸ್ಥಳಾವಕಾಶದ ಕೊರತೆ ಹಾಗೂ ಮೀನುಗಾರರು ತಮ್ಮ ದೋಣಿಗಳ ರಕ್ಷಣೆಯ ಹಿನ್ನೆಲೆಯಲ್ಲಿ ಸುಮಾರು 96 ದೋಣಿಗಳನ್ನು ಮುರುಡೇಶ್ವರ ದೇವಸ್ಥಾನದ ಎದುರಿನ ರಸ್ತೆಯ ಎರಡು ಕಡೆಗಳಲ್ಲಿ ಇಡಲಾಗಿದೆ.
ಇನ್ನೂ ಸಹ ತಾಲೂಕಿನಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಸಮುದ್ರದಲ್ಲಿ ಅಲೆಗಳ ಆರ್ಭಟ ಪೂರ್ಣ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ. ಕೆಲ ತಿಂಗಳ ಬಳಿಕ ಬರುವ ಮಳೆಗಾಲದಿಂದ ಮೀನುಗಾರಿಕೆಗೆ ತೆರಳುವುದು ಕಷ್ಟ ಸಾಧ್ಯವಾಗಿದೆ.
ಸದ್ಯ ಲಾಕ್ಡೌನ್ ಜಾರಿಯಲ್ಲಿರುವುದು ಮೀನುಗಾರರಿಗೆ ದೋಣಿಗಳನ್ನು ಇಡಲು ಅನುಕೂಲವಾಗಿದೆ. ತೌಕ್ತೆ ಚಂಡಮಾರುತ ಹಾಗೂ ಈ ವರ್ಷವೂ ಸಹ ಕೋವಿಡ್ ಎರಡನೇ ಅಲೆ ಪರಿಣಾಮ ಮೀನುಗಾರರಿಗೆ ಭಾರಿ ನಷ್ಟ ಅನುಭವಿಸುವಂತೆ ಮಾಡಿದೆ. ಮುರುಡೇಶ್ವರ ಕಡಲ ತೀರದಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿದ್ದು, ಅನೇಕ ಪಾತಿದೋಣಿ, ಯಾಂತ್ರಿಕ ದೋಣಿಗಳಿಗೆ ಹಾನಿಯುಂಟಾಗಿದೆ. ಆದರೆ ಸರ್ಕಾರ ಮೀನುಗಾರರನ್ನು ಹೊರತುಪಡಿಸಿ ವಿಶೇಷ ಪ್ಯಾಕೇಜ್ ಘೋಷಿಸಿದ್ದು, ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ.