ಬೆಂಗಳೂರು : ಸಹಕಾರ ಸಂಸ್ಥೆಗಳ ಮೂಲಕ ರೈತರು ಪಡೆದಿರುವ ಕೃಷಿ ಸಾಲಗಳ ಕಂತುಗಳ ಮರುಪಾವತಿಯನ್ನು ಮೂರು ತಿಂಗಳ ಅವಧಿಗೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.
ಕೋವಿಡ್-19 ಎರಡನೇಯ ಅಲೆ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಲಾಕ್‌ಡೌನ್ ಹೇರಿರುವುದರಿಂದ ರೈತರಿಗಾಗಿ 3 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿದರದಲ್ಲಿ ಬೆಳೆ ಸಾಲ ವಿತರಿಸುವ ಯೋಜನೆ, ಶೇ.3ರ ಬಡ್ಡಿದರದಲ್ಲಿ 10 ಲಕ್ಷ ರೂ.ವರೆಗೆ ಮಧ್ಯಮಾವಧಿ/ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳನ್ನು ವಿತರಿಸುವ ಯೋಜನೆ ಹಾಗೂ ಸ್ವ-ಸಹಾಯ ಗುಂಪುಗಳಿಗೆ ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆಯಲ್ಲಿ ಏ.1, 2021 ರಿಂದ ಜೂನ್ 30, 2021ರವರೆಗೆ ಗಡುವು ಬರುವ ಸಾಲ ಕಂತುಗಳನ್ನು ಸಾಲ ಪಡೆದ ಸದಸ್ಯರು ಮರುಪಾವತಿಸಲು ಜೂನ್ 30, 2021ರವರೆಗೆ ಕಾಲಾವಕಾಶ ನೀಡಿ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಸರ್ಕಾರಕ್ಕೆ ನೀಡಿದ ಮನವಿಯಲ್ಲಿ ಸಹಕಾರ ಸಂಸ್ಥೆಗಳ ಮೂಲಕ ರೈತರು ಪಡೆದಿರುವ ಕೃಷಿ ಸಾಲಗಳ ಕಂತುಗಳನ್ನು ಮೂರು ತಿಂಗಳ ಅವಧಿಗೆ ವಿಸ್ತರಿಸಲು ಕೋರಿದ್ದರು.
ಮರುಪಾವತಿ ದಿನಾಂಕದವರೆಗಿನ ರಾಜ್ಯ ಸರ್ಕಾರದ ಪಾಲಿನ ಬಡ್ಡಿ ಸಹಾಯಧನವನ್ನು ಸಹಕಾರ ಸಂಸ್ಥೆಗಳಿಗೆ ರಾಜ್ಯ ಸರ್ಕಾರದಿಂದ ಭರಿಸಲು ನಿರ್ಧರಿಸಲಾಗಿದೆ.