ಬ್ರಸ್ಸೆಲ್ಸ್(ಬೆಲ್ಜಿಯಂ): ಪಾಕಿಸ್ತಾನದಲ್ಲಿನ ಅಪಾಯಕಾರಿ ಉಗ್ರ ಮೌಲಾನಾ ಮಸೂದ್ ಅಜರ್ ಅವರನ್ನ ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಿ ವಿಶ್ವಸಂಸ್ಥೆ ನಿನ್ನೆ ಪ್ರಕಟಣೆ ಹೊರಡಿಸಿದೆ. ಈ ಮೂಲಕ 10 ವರ್ಷಗಳ ಭಾರತದ ಹೋರಾಟಕ್ಕೆ ಜಯ ಸಿಕ್ಕಿದೆ.
ಮಸೂದ್ ಅಜರ್ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಲು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದ ಚೀನಾ, ಜಾಗತಿಕ ಒತ್ತಡಕ್ಕೆ ಮಣಿದು ಯೆಸ್ ಎಂದಿದೆ. ಈ ನಡುವೆ ಯೂರೋಪಿಯನ್ ಒಕ್ಕೂಟ ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ರವಾನಿಸಿದೆ.
ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಧಾರ್ಮಿಕ ಅಲ್ಪಸಂಖ್ಯಾತರ ಕಿರುಕುಳ ಪ್ರಕರಣಗಳು, ಹಾಗೂ ರಾಷ್ಟ್ರದಲ್ಲಿರುವ ತಾರತಮ್ಯ ನೀತಿಯನ್ನ ಹೊಡೆದೋಡಿಸಲು ಕೈಗೊಳ್ಳದ ಕ್ರಮಗಳ ಹಿನ್ನೆಲೆಯಲ್ಲಿ ಎಚ್ಚರಿಕೆಕೊಟ್ಟಿರುವ ಯುರೋಪಿಯನ್ ಒಕ್ಕೂಟ, ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪಾಕಿಸ್ತಾನಕ್ಕೆ ನೀಡಲಾಗುತ್ತಿರುವ ಎಲ್ಲ ಅನುದಾನಗಳನ್ನ ಕಡಿತ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಹೆಚ್ಚಿನ ಓದಿಗಾಗಿ:
ಭೂತಕ್ಕೆ ಬೆಂಕಿ ಕಟ್ಟಿದ ವಿಶ್ವಸಂಸ್ಥೆ... ಮಾನವ ಕುಲಕ್ಕೇ ವೈರಿ ಮಸೂದ್ ಅಜರ್‌ಗೆ ಟೈಮ್ ಬಾಂಬ್!
ಈ ಸಂಬಂಧ ಮಂಗಳವಾರ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ಗೆ ಯುರೋಪಿಯನ್ ಪಾರ್ಲಿಮೆಂಟ್ನ 51 ಸದಸ್ಯರು ಪತ್ರ ಬರೆದಿದ್ದಾರೆ. ಕಳೆದ ಕೆಲ ವರ್ಷಗಳಿಂದ ಪಾಕಿಸ್ತಾನ ಸರ್ಕಾರ ಅಲ್ಲಿನ ಉಗ್ರಗಾಮಿ ಸಂಘಟನೆಗಳಿಗೆ ಬೆಂಬಲ ನೀಡುತ್ತಾ ಬಂದಿದೆ. ಧಾರ್ಮಿಕ ಅಲ್ಪಸಖ್ಯಾತರ ಬದುಕು ಪಾಕಿಸ್ತಾನದಲ್ಲಿ ಹೀನ ಸ್ಥಿತಿಗೆ ತಲುಪಿದೆ ಎಂಬ ಅಂಶಗಳನ್ನ ಉಲ್ಲೇಖಿಸಲಾಗಿದೆ.
ಪಾಕ್ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ನಿಯಮಗಳನ್ನ ಉಲ್ಲಂಘನೆ ಮಾಡಿದೆ ಎಂಬ ಅಂಶ ಸೇರಿದಂತೆ ಇನ್ನಿತರ ಸಂಸ್ಥೆಗಳ ಸರ್ವೆಗಳನ್ನ ಪತ್ರದಲ್ಲಿ ಉಲ್ಲೇಖಿಸಿದೆ. ಈ ಮೂಲಕ ಪಾಕಿಸ್ತಾನದ ಮೇಲೆ ದಿನದಿಂದ ದಿನಕ್ಕೆ ಒತ್ತಡ ಹೆಚ್ಚಾಗುತ್ತಿದೆ.