ಬೆಂಗಳೂರು: ಕೋವಿಡ್ ಮಹಾಮಾರಿಯನ್ನು ತಡೆಯಲು ಲಾಕ್ಡೌನ್ ವಿಧಿಸುವುದು ಪರಿಹಾರವಲ್ಲ. ಬದಲಾಗಿ ಎಲ್ಲರಿಗೂ ಲಸಿಕೆ ನೀಡಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸಲಹೆ ನೀಡಿದ್ದಾರೆ.
ಟ್ವೀಟ್ ಮೂಲಕ ಸರ್ಕಾರಕ್ಕೆ ಸಲಹೆ ನೀಡಿರುವ ಅವರು, ತಮ್ಮೆಲ್ಲರಿಗೂ ತಿಳಿದಿರುವಂತೆ ಕೊರೊನಾ 2ನೇ ಅಲೆಯಿಂದ ಇಡೀ ದೇಶ ತತ್ತರಿಸಿ ಹೋಗಿದೆ. ಕೊರೊನಾ ಮಹಾಮಾರಿ ತಡೆಗಟ್ಟಲು ಲಾಕಡೌನ್ ಪರಿಹಾರವಲ್ಲ. 3ನೇ ಅಲೆಯನ್ನು ತಡೆಗಟ್ಟಲು ನಮ್ಮ ಮುಂದಿನ ಪೀಳಿಗೆ ಸುರಕ್ಷಿತವಾಗಿರಬೇಕೆಂದರೆ ಪ್ರತಿಯೊಬ್ಬರಿಗೂ ಲಸಿಕೆ ಕೊಡುವುದರ ಮುಖಾಂತರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕು. ಕೊರೊನಾವನ್ನು ತಡೆಗಟ್ಟಬೇಕೆಂದರೆ ಪ್ರತಿಯೊಬ್ಬರಿಗೂ ಸಾರ್ವತ್ರಿಕವಾಗಿ ಪೋಲಿಯೋ ರೀತಿಯಲ್ಲಿ ಮನೆ ಮನೆಗೆ ತೆರಳಿ ಎಲ್ಲರಿಗೂ ಲಸಿಕೆ ಹಾಕಿಸಬೇಕೆಂದು ನಾನು ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದಿದ್ದಾರೆ.
ಕಳೆದ ಒಂದೂಕಾಲು ವರ್ಷದಿಂದ ದೇಶ ಕೋವಿಡ್ ಮಹಾಮಾರಿಯಿಂದ ತತ್ತರಿಸಿಹೋಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ತಪ್ಪು ನಿರ್ಧಾರದಿಂದಾಗಿ ನಾಗರಿಕರು ಸಮಸ್ಯೆ ಎದುರಿಸುವಂತಾಗಿದೆ. ಕಳೆದ ಎರಡು ತಿಂಗಳಲ್ಲಿ ಎಂದೂ ಕಂಡು ಕೇಳರಿಯದ ರೀತಿಯಲ್ಲಿ ಸಾವುಗಳು ಸಂಭವಿಸಿವೆ. ಆಮ್ಲಜನಕ ಹಾಗೂ ಬೆಡ್ಗಳ ಕೊರತೆಯಿಂದ ಜನರ ಮಾರಣಹೋಮ ನಡೆದಿದೆ. ಇದನ್ನು ತಡೆಯಲು ಲಾಕ್ಡೌನ್ ಮಾಡುವ ಬದಲು ರೋಗನಿರೋಧಕ ಶಕ್ತಿ ಹೆಚ್ಚಿಸುವ ಲಸಿಕೆ ನೀಡಿ ಎಂದು ಹೇಳಿದ್ದಾರೆ. ಇದರಿಂದ ಶಾಶ್ವತವಾಗಿ ಕೊರೊನಾವನ್ನು ದೇಶದಿಂದ ಹೊಡೆದೋಡಿಸಲು ಸಾಧ್ಯ. ಎಲ್ಲರಿಗೂ ಲಸಿಕೆ ನೀಡುವುದಾಗಿ ಹೇಳಿ ಸರ್ಕಾರ ಮಾತು ತಪ್ಪಿದೆ. ಸಾರ್ವತ್ರಿಕವಾಗಿ ಪ್ರತಿಯೊಬ್ಬರಿಗೂ ಉಚಿತವಾಗಿ ಲಸಿಕೆ ನೀಡುವ ಕಾರ್ಯ ಸರ್ಕಾರದಿಂದ ಆಗಲಿ ಎಂದು ಸಲಹೆ ನೀಡಿದ್ದಾರೆ.
ಚೇತರಿಕೆಗೆ ಹಾರೈಕೆ: ಮತ್ತೊಂದು ಟ್ವೀಟ್ ಮಾಡಿರುವ ಖಂಡ್ರೆ, ನಮ್ಮ ನೆಚ್ಚಿನ ನಾಯಕರು, ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಜ್ವರದ ಕಾರಣದಿಂದ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.