ಬೆಂಗಳೂರು: ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಮನೆಗೆ ಆಧಾರವಾಗಿದ್ದ ದುಡಿಯುವ ವ್ಯಕ್ತಿ ಕೋವಿಡ್ನಿಂದ ನಿಧನ ಹೊಂದಿದ್ದರೆ ಅಂತಹ ಕುಟುಂಬಗಳಿಗೆ ಸರ್ಕಾರ ಕನಿಷ್ಠ 5 ಸಾವಿರ ರೂಪಾಯಿಗಳ ಮಾಸಿಕ ಪಿಂಚಣಿ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.
ಅದೇ ರೀತಿ ಕೋವಿಡ್ ನಿಂದ ತಂದೆ - ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾದ ಮಕ್ಕಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು, ಅಂತಹ ಮಕ್ಕಳಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ, ನವೋದಯ ವಸತಿ ಶಾಲೆಗಳಲ್ಲಿ ಆದ್ಯತೆ ನೀಡಬೇಕು ಎಂದು ಸಲಹೆ ಮಾಡಿದ್ದಾರೆ.
ಜಗತ್ತು ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಕೋವಿಡ್ ಮಹಾಮಾರಿ ಸಂಕಷ್ಟ ತಂದೊಡ್ಡಿದ್ದು, ಹಲವು ಕುಟುಂಬಗಳು ಮನೆಗೆ ಆಧಾರವಾಗಿದ್ದ ದುಡಿಯುವ ವ್ಯಕ್ತಿಯನ್ನೇ ಕಳೆದುಕೊಂಡು ಕಂಗೆಟ್ಟು ಹೋಗಿವೆ, ಹಲವು ಮಕ್ಕಳು ಅನಾಥವಾಗಿವೆ. ಈ ಸನ್ನಿವೇಶದಲ್ಲಿ ಸರ್ಕಾರ ಮಾನವೀಯತೆಯನ್ನು ಪ್ರದರ್ಶಿಸಬೇಕು. ನೊಂದವರ ನೆರವಿಗೆ ನಿಲ್ಲಬೇಕು ಎಂದು ಈಶ್ವರ ಖಂಡ್ರೆ ಆಗ್ರಹಿಸಿದ್ದಾರೆ.