ನವದೆಹಲಿ : ಆಮ್ಲಜನಕ ಅಕ್ರಮ ದಾಸ್ತಾನು ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ನವನೀತ್ ಕಲ್ರಾನನ್ನು ದೆಹಲಿ ಪೊಲೀಸರು ಭಾನುವಾರ ಬಂಧಿಸಿದ್ದರು.
ಈ ಸಂಬಂಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದ ಎರಡು ದಿನಗಳ ನಂತರ ಹಣಕಾಸು ತನಿಖಾ ಸಂಸ್ಥೆ ಇಂದು ಹಲವಾರು ಸ್ಥಳಗಳಲ್ಲಿ ಶೋಧ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
"ಕಲ್ರಾ ಆಸ್ತಿ, ಮ್ಯಾಟ್ರಿಕ್ಸ್ ಸೆಲ್ಯುಲಾರ್ ಸರ್ವೀಸಸ್ ಸಿಬ್ಬಂದಿ ಮತ್ತು ದಕ್ಷಿಣ ದೆಹಲಿಯ ಒಂದು ಫಾರ್ಮ್ ಹೌಸ್ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಇಡಿ ಶೋಧ ನಡೆಸುತ್ತಿದೆ. ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಮೂಲಗಳು ಮಾಹಿತಿ ನೀಡಿವೆ.
ಕಲ್ರಾ ಮಾಲೀಕತ್ವದ 'ಖಾನ್ ಚಾಚಾ, ಟೌನ್ ಹಾಲ್ ಮತ್ತು ನೇಜ್ ಆ್ಯಂಡ್ ಜು' ರೆಸ್ಟೋರೆಂಟ್‌ಗಳಲ್ಲಿ ಕಾನೂನು ಬಾಹಿರವಾಗಿ ಸಂಗ್ರಹಿಸಲಾಗಿದ್ದ 524 ಆಮ್ಲಜನಕ ಸಿಲಿಂಡರ್‌ಗಳನ್ನು ಮೇ 7ರಂದು ವಶಪಡಿಸಿಕೊಳ್ಳಲಾಗಿತ್ತು.
ಈ ಬಳಿಕ ಮೇ 7ರಿಂದ ತಲೆಮರೆಸಿಕೊಂಡಿದ್ದ ಕಲ್ರಾ ಅವರು ಬಂಧನದಿಂದ ತಪ್ಪಿಸಿಕೊಳ್ಳಲು ದೆಹಲಿ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆ ಮಾಡಿದ್ದ ನ್ಯಾಯಾಲಯವು ಕಲ್ರಾ ಅವರಿಗೆ ಜಾಮೀನು ನೀಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದ ಕಲ್ರಾ ಅವರಿಗೆ ಅಲ್ಲಿಯೂ ಜಾಮೀನು ದೊರೆತಿರಲಿಲ್ಲ.
ಬಳಿಕ ಗುರುಗ್ರಾಮ್‌ನ ತೋಟದ ಮನೆಯೊಂದರಿಂದ ಕಲ್ರಾ ಅವರನ್ನು ಭಾನುವಾರದಂದು ಬಂಧಿಸಲಾಯಿತು. ಸದ್ಯ ಕಲ್ರಾನನ್ನು 14 ದಿನಗಳ ನ್ಯಾಯಾಂಗ ಕಸ್ಟಡಿಗೆ ಕಳುಹಿಸಲಾಗಿದೆ.