ಸುಬ್ರಹ್ಮಣ್ಯ(ದ.ಕ): ದೇಶವ್ಯಾಪಿ ಹರಡಿರುವ ಕೊರೊನಾ ವೈರಸ್ ನಿರ್ಮೂಲನೆಗಾಗಿ, ಜನತೆಯ ಆರೋಗ್ಯ ವರ್ಧನೆಗಾಗಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಧನ್ವಂತರಿ ಹೋಮ ನೆರವೇರಿತು.
ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ಹೋಮದ ವೈದಿಕ ವಿದಿವಿಧಾನ ನೆರವೇರಿಸಿದರು. ದೇವಳದ ಅರ್ಚಕರು ಹಾಗೂ ಪುರೋಹಿತರು ಸಹಕರಿಸಿದರು. ಮೇ 5 ರಿಂದ ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರ ನೇತೃತ್ವದಲ್ಲಿ ಶ್ರೀ ದೇವಳದ 11 ಜನ ಪುರೋಹಿತರು ನಿರಂತರವಾಗಿ ತುಪ್ಪದೊಂದಿಗೆ 1 ಲಕ್ಷ ಧನ್ವಂತರಿ ಜಪ ನೆರವೇರಿಸಿದರು.
ಹೋಮದ ಬಳಿಕ ದೇಶ ಹಾಗೂ ರಾಜ್ಯದ ಜನತೆಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರು ಆರೋಗ್ಯ ಸಮೃದ್ಧಿಯನ್ನು ಕರುಣಿಸಲಿ ಹಾಗೂ ಕೊರೊನಾ ಸಾಂಕ್ರಾಮಿಕ ರೋಗವು ಲೋಕದಿಂದ ಶೀಘ್ರ ತೊಲಗಿ ಸರ್ವರೂ ಆರೋಗ್ಯವಂತರಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರ ನೇತೃತ್ವದಲ್ಲಿ ಅರ್ಚಕರ ಹಾಗೂ ಪುರೋಹಿತರ ವರ್ಗದವರು ನಿರಂತರವಾಗಿ ಮೇ 5 ರಿಂದ ಸರಕಾರದ ಕೋವಿಡ್-19 ಮಾರ್ಗಸೂಚಿ ಪ್ರಕಾರ ಋಗ್ವೇದ, ಯರ್ಜುವೇದ, ಸಾಮವೇದ ಪಾರಾಯಣಗಳು, ರುದ್ರ ಪಾರಾಯಣ, ಪವಮಾನ ಸೂಕ್ತ ಪಾರಾಯಣ, ಸರ್ಪಸೂಕ್ತ, ಸರ್ಪತ್ರಯ ಮಂತ್ರ ಜಪ, ಮನ್ಯುಸೂಕ್ತ, ವಿಷ ಕ್ರಿಮಿಹರ ಮಂತ್ರ ಜಪಗಳನ್ನು ನೆರವೇರಿಸುತ್ತಿದ್ದಾರೆ.