ಬೆಳಗಾವಿ: ರಾಜ್ಯದ ಭೂಮಿಯ ಆಳದಲ್ಲಿರುವ ಖನಿಜ ಸಂಪತ್ತಿನ ಸಮಗ್ರ ಸಮೀಕ್ಷೆಗೆ ಅಂತರರಾಷ್ಟ್ರೀಯ ಟೆಂಡರ್ ಕರೆಯಲಾಗಿದೆ. ಈ ಸಮೀಕ್ಷೆಯಿಂದ ರಾಜ್ಯದಲ್ಲಿರುವ ಒಟ್ಟಾರೆ ಖನಿಜ ಸಂಪತ್ತಿನ ನಿಖರ ಮಾಹಿತಿ ದೊರೆಯಲಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಒಮ್ಮೆ ರಾಜ್ಯದ ಖನಿಜ ಸಂಪತ್ತಿನ ನಿಖರ ಮಾಹಿತಿ ಲಭಿಸಿದರೆ ಅದರ ಸಮರ್ಪಕ ಬಳಕೆಯ ಯೋಜನೆಯನ್ನು ರೂಪಿಸಬಹುದು. ಐವತ್ತು ವರ್ಷದ ಹಿಂದಿನ ಸಮೀಕ್ಷೆ ಆಧರಿಸಿ ಖನಿಜ ಸಂಪತ್ತು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದರೆ ಅತ್ಯಾಧುನಿಕ ಸಮೀಕ್ಷೆ ಮೂಲಕ ಖನಿಜ ಸಂಪತ್ತು ಪತ್ತೆ ಮಾಡಿದಾಗ ಪ್ರಸ್ತುತ ಸನ್ನಿವೇಶದಲ್ಲಿ ಕರ್ನಾಟಕ ಅತ್ಯಂತ ಶ್ರೀಮಂತ ರಾಜ್ಯವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಖನಿಜ ಸಂಪತ್ತಿನ ಸದ್ಬಳಕೆ ಮಾಡುವುದರ ಜತೆಗೆ ಉದ್ಯೋಗಗಳನ್ನು ಸೃಷ್ಟಿಸುವುದು ಕೂಡ ತಮ್ಮ ಆದ್ಯತೆಯಾಗಿದೆ. ವಿಭಾಗವಾರು ಮೈನಿಂಗ್ ಅದಾಲತ್ ಮೂಲಕ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ. ಅಕ್ರಮ ಗಣಿಗಾರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಕೂಡ ಈಗಾಗಲೇ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮರಳನ್ನು ಗ್ರೇಡ್ ಪ್ರಕಾರ ವಿಂಗಡಿಸಿ ಅಗತ್ಯತೆ ಆಧರಿಸಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಮಿತಿಗಳ ಮೂಲಕ ವಿತರಣೆಗೆ ಅನುಕೂಲವಾಗುವಂತೆ ಸ್ಯಾಂಡ್ ಕಾರ್ಪೋರೇಷನ್ ಸ್ಥಾಪಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಸಲಾಗುತ್ತಿದೆ. ಈ ಬಗ್ಗೆ ಕೂಡ ಶೀಘ್ರ ಸೂಕ್ತ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದರು.
ಸ್ಕೂಲ್ ಆಫ್ ಮೈನಿಂಗ್ ಆರಂಭ:
ಸ್ಕೂಲ್ ಆಫ್ ಮೈನಿಂಗ್ ಆರಂಭಿಸಿ ಸುರಕ್ಷಿತ ಗಣಿಗಾರಿಕೆ(ಮೈನಿಂಗ್) ವಿಧಾನಗಳು ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಕುರಿತು ತರಬೇತಿ ನೀಡಲಾಗುವುದು. ಗಣಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪೊಲೀಸ್ ಮಾದರಿಯಲ್ಲಿ ಸಮವಸ್ತ್ರ, ವಾಕಿಟಾಕಿ, ಭದ್ರತಾ ಸಿಬ್ಬಂದಿಯನ್ನು ಒದಗಿಸಲು ಯೋಜನೆ ರೂಪಿಸಲಾಗಿದೆ. ಸ್ಯಾಂಡ್ ಪಾಲಿಸಿ ಸರಿಯಾಗಿ ಅನುಷ್ಠಾನಗೊಂಡರೆ ಖನಿಜ ಸಂಪತ್ತು ಸಮರ್ಪಕ ಬಳಕೆ ಸಾಧ್ಯವಾಗಲಿದೆ. ದಂಡ ಪಾವತಿಸದೇ ಇರುವ ಕಾರಣಕ್ಕೆ ಸ್ಥಗಿತಗೊಂಡಿರುವ ಕ್ರಷರ್ಗಳಿಂದ ಅಫಿಡವೇಟ್ ಪಡೆದುಕೊಂಡು ಅವುಗಳ ಪುನರಾರಂಭಕ್ಕೆ ಅನುಮತಿ ನೀಡಲಾಗುತ್ತಿದೆ. ಇಂತಹ ಕ್ರಷರ್ ಗಳನ್ನು ಡ್ರೋನ್ಗಳ ಮೂಲಕ ಸಮಗ್ರ ಸಮೀಕ್ಷೆ ನಡೆಸಿದ ಬಳಿಕ ಶುಲ್ಕ ಅಥವಾ ಬಾಕಿ ದಂಡ ಪಾವತಿಗೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಸುಸಜ್ಜಿತ ಆಂಬ್ಯಲೆನ್ಸ್ ಖರೀದಿಗೆ ತೀರ್ಮಾನ: ಖನಿಜ ನಿಧಿಯಡಿ ರಾಜ್ಯದ ಎಲ್ಲ ತಾಲ್ಲೂಕು ಆಸ್ಪತ್ರೆಗಳಿಗೆ ಇಲಾಖೆಯ ವತಿಯಿಂದ ಸುಸಜ್ಜಿತವಾದ ಆಂಬ್ಯುಲೆನ್ಸ್ ನೀಡಲು ಚಿಂತನೆ ನಡೆಸಲಾಗುತ್ತಿದೆ. ಸುಸಜ್ಜಿತವಾದ ಆ್ಯಂಬುಲೆನ್ಸ್, ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ ಟ್ಯಾಂಕರ್ಗಳನ್ನು ನೀಡಲು ನಿರ್ಧರಿಸಲಾಗಿದೆ. ಆದಷ್ಟು ಬೇಗನೇ ರಾಜ್ಯಮಟ್ಟದಲ್ಲಿ ಇವುಗಳನ್ನು ಖರೀದಿಸಿ ಪೂರೈಸಲಾಗುವುದು ಎಂದು ನಿರಾಣಿ ತಿಳಿಸಿದರು.