ಬೆಂಗಳೂರು: ದೇಶಾದ್ಯಂತ ಲಾಕ್‌ಡೌನ್ ತೆರವಾದರೂ, ಜವಳಿ ಕ್ಷೇತ್ರದಲ್ಲಿ ಮಾತ್ರ ಸಂಭ್ರಮವಿಲ್ಲ. ಜೂನ್ 8 ರಿಂದ ಲಾಕ್‌ಡೌನ್ ಸಂಪೂರ್ಣ ತೆರವಾಗಿ ಜನ ಜೀವನ ನಿಧಾನವಾಗಿ ಸಹಜಸ್ಥಿತಿಗೆ ಮರಳುತ್ತಿದೆ. ಎಲ್ಲಾ ಅಂಗಡಿ-ಮುಂಗಟ್ಟುಗಳು ಪುನರಾರಂಭಗೊಂಡಿದ್ದು, ವಾಣಿಜ್ಯ ಚಟುವಟಿಕೆಗಳೂ ಚುರುಕುಗೊಳ್ಳುತ್ತಿವೆ. ಆದರೆ, ಜವಳಿ ಕ್ಷೇತ್ರ ಮಾತ್ರ ಈಗಲೂ ಮಂಕಾಗಿದೆ.
ಅನ್ಲಾಕ್ ನಂತರ ಮದುವೆ, ಹಬ್ಬದ ಕಾರ್ಯಕ್ರಮಗಳಿಗೆ ಅವಕಾಶ ಇದ್ದರೂ, ಅವುಗಳು ಮನೆಗಳಿಗೆ ಸೀಮಿತವಾಗಿವೆ. ಈ ಮಧ್ಯೆ ಮದುವೆ ಸೀಜನ್ ಮುಗಿದು, ಮಳೆಗಾಲ ಬಂದಿದೆ. ಪರಿಣಾಮ ಯಾವುದೇ ವ್ಯತ್ಯಾಸ ಆಗಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಸಭೆ, ಸಮಾರಂಭಗಳಿಗೆ ಅವಕಾಶವಿಲ್ಲ. ಹೀಗಾಗಿ, ಶುಭ ಸಮಾರಂಭಗಳೇ ಇಲ್ಲದಿದ್ದರೆ ಜವಳಿ ವ್ಯಾಪಾರ ಅಷ್ಟಕಷ್ಟೇ. ಇದು ಜವಳಿ ಉದ್ಯಮಿಗಳ ಆತಂಕಕ್ಕೆ ಕಾರಣವಾಗಿದೆ. ಇನ್ನು ಬಟ್ಟೆಗಳನ್ನು ಹೊಲಿದು ಜೀವನ ನಡೆಸುವ ಟೈಲರ್ಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವೇನೂ ಇಲ್ಲ. ಇತ್ತ ಅಂಗಡಿಕಾರರು ಗ್ರಾಹಕರನ್ನು ಅಂಗಡಿಗಳತ್ತ ಸೆಳೆಯಲು ಹೊಸ ಹೊಸ ತಂತ್ರಜ್ಞಾನ ಬಳಸುತ್ತಿದ್ದಾರೆ. ಆನ್ಲೈನ್ ಮತ್ತು ಜಾಲತಾಣಗಳ ಮೂಲಕ ರಿಯಾಯಿತಿ ಆಫರ್ ನೀಡುತ್ತಿದ್ದಾರೆ. ಆದರೆ, ಗ್ರಾಹಕರು ಗುಣಮಟ್ಟದ ಬಟ್ಟೆಗಳನ್ನು ಕೈಬಿಟ್ಟು ಆನ್ಲೈನ್ನಂತಹ ಮೋಸದ ಜಾಲದ ಬಲೆಗೆ ಬೀಳುತ್ತಿದ್ದಾರೆ. ಹೀಗಾಗಿ, ಬಟ್ಟೆ ಅಂಗಡಿಗಳು ಗ್ರಾಹಕರಿಲ್ಲದೇ ಬಿಕೋ ಎನ್ನುತ್ತಿವೆ ಎನ್ನುತ್ತಾರೆ ಜವಳಿ ಉದ್ಯಮಿಗಳು.
ವಾಣಿಜ್ಯ ನಗರಿ ಹುಬ್ಬಳ್ಳಿ, ಬೆಣ್ಣೆ ನಗರಿ ದಾವಣಗೆರೆ, ಗಣಿನಾಡು ಬಳ್ಳಾರಿ ಜಿಲ್ಲೆಗಳಲ್ಲಿ ಸಾವಿರಾರು ಕೋಟಿ ವ್ಯಾಪಾರ ವಹಿವಾಟಿಗೆ ಲಾಕ್‌ಡೌನ್ ದೊಡ್ಡ ಪ್ರಮಾಣದಲ್ಲಿ ಹೊಡೆತ ನೀಡಿದೆ. ಇದು ಕೇವಲ ಈ ಜಿಲ್ಲೆಗಳಿಗೆ ಸೀಮಿತವಲ್ಲ. ರಾಜ್ಯ, ದೇಶಕ್ಕೂ ಸೇರಿದೆ. ಕೊರೊನಾ ಬರುವುದಕ್ಕೂ ಮುನ್ನ ವಹಿವಾಟಿಗೂ ಈಗಿನ ವಹಿವಾಟಿಗೂ ಅಜ-ಗಜಾಂತರ ವ್ಯತ್ಯಾಸ ಕಂಡು ಬಂದಿದೆ. ಬಳ್ಳಾರಿಯಲ್ಲಿ ಶೇಕಡಾ 50 ರಷ್ಟು, ದಾವಣಗೆರೆಯಲ್ಲಿ ಶೇ.75 ರಷ್ಟು ವ್ಯಾಪಾರ ವಹಿವಾಟು ಕುಸಿದಿದೆ ಎನ್ನಲಾಗ್ತಿದೆ. ಹೀಗೆ ಮುಂದುವರೆದರೆ ನಮ್ಮ ಸ್ಥಿತಿ ಮತ್ತಷ್ಟು ಘೋರವಾಗಿರಲಿದೆ ಎಂದು ಉದ್ಯಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.