ಬೆಂಗಳೂರು: ಬೆಂಗಳೂರು ಜಲಮಂಡಳಿಯ ವ್ಯಾಪ್ತಿಯಲ್ಲಿ ಶೇ. 36 ರಷ್ಟಿರುವ ನೀರು ಸೋರಿಕೆಯನ್ನು ಶೇ. 20ಕ್ಕೆ ಇಳಿಸುವ ಬಗ್ಗೆ ಕಾರ್ಯತಂತ್ರ ರೂಪಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ದೇಶನ ನೀಡಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪ ಬೆಂಗಳೂರು ಜಲ ಮಂಡಳಿಯ ಕಾರ್ಯ ಚಟುವಟಿಕೆಗಳ ಪ್ರಗತಿ ಪರಿಶೀಲನೆ ನಡೆಸಿದರು. ನೀರು ಸೋರಿಕೆ ತಡೆಗಟ್ಟುವ ಕುರಿತು ಇತರ ನಗರಗಳ ಮಾಹಿತಿಯನ್ನೂ ಅಧ್ಯಯನ ನಡೆಸಿ, ವರದಿ ಸಲ್ಲಿಸುವಂತೆ ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸೂಚಿಸಿದರು.
ಬೆಂಗಳೂರು ಜಲ ಮಂಡಳಿಯು ಮಳೆಗಾಲದಲ್ಲಿ ತುರ್ತು ಸಂದರ್ಭ ನಿರ್ವಹಣೆಗಾಗಿ ಕೈಗೊಂಡಿರುವ ಮುನ್ನೆಚ್ಚರಿಕೆಯ ಕ್ರಮಗಳ ಕುರಿತು ಮುಖ್ಯಮಂತ್ರಿಗಳು ಸಭೆಯಲ್ಲಿ ಮಾಹಿತಿ ಪಡೆದರು.
ಬೆಂಗಳೂರು ನಗರಕ್ಕೆ ಸೇರ್ಪಡೆಯಾದ 110 ಹಳ್ಳಿಗಳಲ್ಲಿ ಕುಡಿಯುವ ನೀರಿನ ಕೊಳವೆ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದ್ದು, 51 ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. 2022 ಡಿಸೆಂಬರ್ ವೇಳೆಗೆ ಉಳಿದ 59 ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುವುದು. ಈ ಗ್ರಾಮಗಳಲ್ಲಿ ಒಳಚರಂಡಿ ಕಾಮಗಾರಿಯು ಮುಕ್ತಾಯದ ಹಂತದಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ನಗರಕ್ಕೆ 775 ಎಂ.ಎಲ್. ಹೆಚ್ಚುವರಿ ನೀರು ಒದಗಿಸುವ 5,550 ಕೋಟಿ ರೂ. ವೆಚ್ಚದ ಕಾವೇರಿ 5 ನೇ ಹಂತ ಯೋಜನೆಯು 2023ರಲ್ಲಿ ಪೂರ್ಣಗೊಳಿಸುವ ಗುರಿಯಿದೆ. ಈ ವರೆಗೆ ಕಾಮಗಾರಿಗಳು ನಿಗದಿತ ಗುರಿಗಿಂತ ವೇಗವಾಗಿ ಪ್ರಗತಿ ಸಾಧಿಸಿವೆ ಎಂದು ವಿವರಣೆ ನೀಡಿದರು. ಎಲ್ಲ ಯೋಜನೆಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.