ಬೆಂಗಳೂರು: ಲಾಲ್ ಬಾಗ್ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಲಾಲ್‌ಬಾಗ್ ಶಾಖೆಗೆ ನಕಲಿ ದಾಖಲೆ ಸಲ್ಲಿಸಿ 9.39 ಕೋಟಿ ರೂ. ಸಾಲ ಪಡೆದು ಮರುಪಾವತಿ ಮಾಡದೆ ವಂಚನೆ ಮಾಡಿದ ಪ್ರಕರಣದಲ್ಲಿ ಚೆನ್ನೈನ ಸಿಬಿಐ ಆರ್ಥಿಕ ಅಪರಾಧಗಳ ದಳದಲ್ಲಿ (ಇಒಬಿ) ಪ್ರಕರಣ ದಾಖಲಾಗಿದೆ.
ಇನ್ ಫೆಂಟ್ರಿ ರಸ್ತೆಯಲ್ಲಿ ಕಚೇರಿ ಹೊಂದಿರುವ ಐ.ಟಿ ಎಸ್ಟೇಟ್ಸ್‌ನ ಮಾಲೀಕ ಎನ್.ಡಿ ರವಿ ಹಾಗೂ ಸಾಲಗಾರರಾದ ಜೊ.ಅಬ್ರಾಹಂ, ರಮ್ಯ ಸೋಲೋಮನ್, ವರ್ಚಸ್ವಿ ಚಂದನ್, ಎನ್. ಧನಲಕ್ಷ್ಮೀ ಸೇರಿದಂತೆ ಒಟ್ಟು 16 ಜನರು ಮತ್ತು ಇನ್ನಿತರ ಅಪರಿಚಿತರ ವಿರುದ್ಧ ಕೇಸ್ ದಾಖಲಾಗಿದೆ.
ಎಸ್‌ಬಿಐನ ಲಾಲ್‌ಬಾಗ್ ಶಾಖೆ (ಆರ್‌ಪಿಸಿಪಿಸಿ) ಸಹಾಯಕ ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ ಮಂಜುನಾಥ ನೀಡಿದ ದೂರು ಆಧರಿಸಿ ಈ ಪ್ರಕರಣ ದಾಖಲಾಗಿದೆ. ಸೀಗೇಹಳ್ಳಿ ಗ್ರಾಮದಲ್ಲಿ ಶ್ರೀನಿವಾಸಯ್ಯ, ಗೀತಾ, ಲೋಕೇಶ ಎಂಬುವರ 1 ಎಕರೆ 7 ಗುಂಟೆ ಜಮೀನಿನಲ್ಲಿ ಗಾರ್ಡನ್ ರೆಸಿಡೆನ್ಸಿ ಹೆಸರಿನಲ್ಲಿ ಅಪಾರ್ಟ್‌ಮೆಂಟ್ ನಿರ್ಮಾಣ ಯೋಜನೆಗಾಗಿ 2013ರಲ್ಲಿ ಬಿಲ್ಡರ್ ಎನ್.ಡಿ ರವಿ ಅವರು ಜಂಟಿ ಅಭಿವೃದ್ದಿ ಒಪ್ಪಂದ ಮಾಡಿಕೊಂಡಿದ್ದರು. ಒಟ್ಟು 132 ಪ್ಲ್ಯಾಟ್‌ಗಳನ್ನು ನಿರ್ಮಿಸುವ ಯೋಜನೆ ರೂಪಿಸಿದ್ದರು. ಅದರಲ್ಲಿ 15 ಜನರು ಗಾರ್ಡನ್ ರೆಸಿಡೆನ್ಸಿಯಲ್ಲಿ ಪ್ಲ್ಯಾಟ್ ಖರೀದಿ ಮಾಡುತ್ತಿರುವುದಾಗಿ ಬಿಲ್ಡರ್ ರವಿ ಅವರು ಬ್ಯಾಂಕಿಗೆ ಕರೆದೊಯ್ದು ಪರಿಚಯಿಸಿದ್ದರು.
ಬ್ಯಾಂಕ್‌ನಿಂದ ಒಟ್ಟು 15 ಜನರಿಗೆ 65ರಿಂದ 71 ಲಕ್ಷ ರೂ. ಸಾಲ ಮಂಜೂರು ಮಾಡಿ 2016ರ ಜೂನ್‌ನಿಂದ 2017ರ ಮಾರ್ಚ್‌ವರೆಗೆ 62 ಲಕ್ಷ ರೂ.ಯಿಂದ 79 ಲಕ್ಷ ರೂ. ವರೆಗೆ ಸಾಲ ಬಿಡುಗಡೆ ಮಾಡಲಾಗಿತ್ತು. ಈ ಪೈಕಿ ಕೆಲವರು ಕಾರ್ ಲೋನ್ ಸೇರಿಸಿ ಕೊಂಬೋ ಸಾಲ ಕೂಡ ಪಡೆದುಕೊಂಡಿದ್ದರು. ನಂತರದ ಕೆಲ ತಿಂಗಳು ಸಾಲಗಾರರು ಕಂತು ಕಟ್ಟುತ್ತಿದ್ದರು.
ಆದರೆ, 2018 ಜನವರಿ ತಿಂಗಳಲ್ಲಿ ಸಾಲ ಪಡೆದವರು ಮರುಪಾವತಿ ಮಾಡದೆ ಇರುವುದು ಬೆಳಕಿಗೆ ಬಂದಿತ್ತು. ಹೀಗಾಗಿ, ಸಾಲಗಾರರ ಹೆಸರು, ವಿಳಾಸ, ಕೆಲಸದ ಸ್ಥಳ ಪರಿಶೀಲಿಸಿದಾಗ ನಾಲ್ಕು ಜನ ಮಾತ್ರ ವಿಳಾಸದಲ್ಲಿ ವಾಸವಿದ್ದು ಉಳಿದವರು ಇರಲಿಲ್ಲ. ಅಲ್ಲದೇ, ಅವರು ಹೇಳಿದ ಕಂಪೆನಿಯಲ್ಲಿ ಕೆಲಸ ಮಾಡುತ್ತಿರಲಿಲ್ಲ. ನಂತರ ಅವರು ನೀಡಿದ್ದ ಐಟಿ ರಿಟರ್ನ್ ಸೇರಿದಂತೆ ಇನ್ನಿತರ ದಾಖಲೆಗಳನ್ನು ಪರಿಶೀಲಿಸಿದಾಗ ಅವು ಕೂಡಾ ಫೋರ್ಜರಿಯಾಗಿದ್ದು ಕಂಡು ಬಂದಿದೆ.